ಮಂಗಳವಾರ, ಜುಲೈ 6, 2010

ನಿರೀಕ್ಷೆ

ತಿಳಿನೀರ ಕೊಳದಲ್ಲಿ
ಚಳಿಯ ಗಾಳಿಗೆ ಸೋಕೆ
ಎದ್ದ ಅಲೆಯಂತಾಗಿ ಅದುರುತಿರುವೆ

ಕಮಲಗಳ ಸೋಕದಲೆ
ನನ್ನ ಚಳಿನನಗಿರಲಿ
ಎಂದು ತಂತಾನೆ ನಾ ಕೊರಗುತಿರುವೆ

ತಾರೆಗಳು ನಗುವಾಗ
ಇಳಿಸಿಕೊಳ್ಳುತ ಒಳಗೆ
ನೀರಲ್ಲೆ ಚಿತ್ತಾರ ಬರೆದು ನಲಿವೆ

ಕಾಯುತಿಹೆನಾ ಬೆಳಕ
ರಂಗುಗಳ ಸರಿ ಎರಕ
ಹೂಗಳರಳುವ ಪುಳಕ
ಬೆಳಕಿನೊಳು ಬೆಳಕನ್ನು ತುಂಬಿಕೊಳುವೆ

ದಾಸವಾಳ

ನಿನ್ನ ಸೆಳೆವ ಗಂಧವಿಲ್ಲ
ನೀನೆ ಎಂಬ ಬಂಧವಿಲ್ಲ
ಇರುವಿನರಿವೆ ಒಲವು ತುಂಬಿ ನಗುವು ಮೊಗದಲಿ

ಬೆಳಕುದೇವ ನಗುವ ಕೊಟ್ಟ
ಹಕ್ಕಿ ಹಾತೆಯೊಲವನಿತ್ತ
ಕಂಡ ಮನುಜ ತಾನೂ ಒಳಗೆ ಬೆಳಗಿಕೊಳ್ಳಲಿ

ಹಾಸ ಹಂಚುವಾಸೆಯಲ್ಲಿ
ದಾಸಿಯಾದೆ ಸೃಷ್ಟಿಗಿಲ್ಲಿ
ದಾಸವಾಳದಾಳದೊಲುಮೆ ಸಿರಿಯ ಹಂಚಲು

ಅರೆನಿದ್ದೆಯ ಪದಗಳು

ನವಿರು ನೂಪುರ ನಾದ
ಕಣ್ದೆರೆಯೆ ಕನಸು
ಮುಸುಕು ಮೋಡದ ನಡುವೆ
ಮುಸಿನಕ್ಕ ಚಂದಿರ

ಹಸೆಯ ಹಾಕಿದ ಹಾಗೆ
ಹುಸಿಯೆ ಬಳೆಗಳ ಸದ್ದು
ಹೊಸಿಲ ಬಾಗಿಲ ತೆರೆದೆ
ಚಳಿಗಾಳಿಗೂ ಮತ್ಸರ

ಅಂಗಳದ ಚಪ್ಪರದಿ
ಬೆಳೆದು ಬಿಳಿದಿದೆ ಕಂಪು
ನಾರು ಹೊಸೆಯುವ ಹಾಡು ಎನಿತು ತಂಪು
ಕಟ್ಟೊಂದು ಕೂಸು ಜೋಗುಳವ ಕೇಳಿರ?

ಕನಸು ಕಟ್ಟಿದೆ ಇರುಳು
ಮೊಲ್ಲೆ ಮುಡಿದಿದೆ ಹೆರಳು
ಎಲ್ಲೋ ಕಾದಿದೆ ನೆರಳು
ಇಲ್ಲಿ ನಿದ್ದೆಗೂ ಬೇಸರ!!

ಭಾನುವಾರ, ಜುಲೈ 4, 2010

ಸಾಕಷ್ಟು ಸತ್ತು

ಮಾವಿನ ನಾರುಗಳೆಡೆಯಲಿ ತುಟಿಯಿಟ್ಟು ರಸಹೀರುತ್ತಾ
ಕಪ್ಪೆಗಳ ಆಲಾಪದ ಅರ್ಥ ಹುಡುಕುತ್ತಿದ್ದೆ
ಇಲ್ಲಿ ಎದೆ ನಿನ್ನ ಕರೆದಾಗ ಕಿವುಡಾಗಿ ಗೊರೆಯುತ್ತಾ
ಮತ್ತೆ ಏನೂ ಕೇಳದಂತೆ ಗೊರೆಯುತ್ತಿದ್ದೇನೆ
ಎಲ್ಲೋ ದಾರಿ ತಪ್ಪಿದ್ದೇನೆ!



ಎಲೆಯಿಂದಲೆಲೆಗೆ ಇಳಿದ ಹನಿಗಳ ಸದ್ದು
ಭುವಿಯೊಡಲಲ್ಲಿ ಪಿಸುಗುಟ್ಟುವಾಗ ನಿದ್ದೆಗೆ ಜಾರುತ್ತಿದ್ದೆ
ಈಗ ನೋಡಿದರೆ ಫ್ಯಾನಿನ ಲವಲವದಲ್ಲಿ ಮಗ್ಗುಲು ಬದಲಿಸಿ
ಕರೆಂಟು ಹೋದಾಗಲೆಲ್ಲಾ ನೂರೆಂದು ಶಪಿಸಿ ಕಾಲ ತಳ್ಳಿದ್ದೇನೆ
ಎಲ್ಲೋ ತುಕ್ಕು ಹಿಡಿಯುತ್ತಿದ್ದೇನೆ!

ಜಗದೇಕವೀರರ ಕತೆಕೇಳಿ ಅದರ ಕನಸಲಿ ಬಿದ್ದು
ಇಲ್ಲದ ಮೀಸೆ ತಿರುವುತ್ತಿದ್ದೆ
ಕ್ರೀಂ ಮರೆತ್ತದ್ದಕ್ಕೆ ಹಲ್ಕಚ್ಚಿ ಹಾಗಾಗೇ ಕೆರೆದು
ಸೂಟಿನಲಿ ಸೇರುತ್ತ ಸಂತೆಗೆ ರೆಡಿಯಾಗಿದ್ದೇನೆ
ಸಕಷ್ಟು ಸತ್ತು ಮರುಸುತ್ತು ನಗುತ್ತಿದ್ದೇನೆ!

ನಾನು



ನಿನ್ನೆಯ ಹೆಣ
ನಾಳೆಯ ಮಗು
ಸಾವಿರಾರು ನಾಳೆಗಳ ಬಸುರಿಯಾಗಿ
ಸತ್ತು ಹುಟ್ಟಿ, ಹುಟ್ಟು ಹಾಕುತ್ತ
ಮರಣ ಜನ್ಮ ಪ್ರಸವವೇದನೆಗಳ ಸಮರಸವ
ಸವಿಯುತ್ತ ಬದುಕುವಾಗ
ಆದಿ ಅಂತ್ಯಗಳ ಗೊಡವೆ ನನಗೇಕೆ?

ನಾ ನಡೆದಷ್ಟೂ ಜಗವು ಅರಳುತ್ತಿರಲು
ಕಣ್ಣು ತೆರೆದಷ್ಟೂ ಬಣ್ಣ ಕೆರಳುತ್ತಿರಲು
ಬೆಳಕು ಕರೆಯುತ್ತಿರಲು
ಮತ್ಯಾಕೆ ಬೇಕೆನಗೆ ಇಲ್ಲದ ಗೋಳು?

ನಿನ್ನೆಗಳ ಹೆಣಹೂತ ಭೂಮಿಯಲಿ
ನಾಳೆಗಳ ಬೀಜನೆಟ್ಟು
ಚಿಗುರುವ ಚೆಂದಕ್ಕೆ ಕಾಯುವ ಮಗು ನಾನು
ನನಗೊಂದು ಬೇಲಿ ಬೇಕೇನು?