ಭಾನುವಾರ, ಜೂನ್ 26, 2011

ಪಯಣ

ಸರಿಬೆಟ್ಟದೊಡಲು ಸಿಡಿದಂತೆ ಸಿಡಿಲು
ಮರಿಹುಟ್ಟಿಬರಲು ಸೆಳೆವಂತೆ ಮಡಿಲು
ಪರಿಪರಿಯ ಸದ್ದು ಮಾಡುತ್ತ ಬರಲು
ಹನಿಗಳೆಡೆಗೆ ಏನಂಥಾ ಮಮತೆ....

ಬರಕೊಚ್ಚಿ ಪೂರ ಸಾಗಿಹುದು ದೂರ
ಕೊರೆಮಿಂಚುತಿರಲು ಸೆಳೆದಿತ್ತು ಕಾಲು

ಉರಿಬಿಸಿಲು ಸಿರಿಹಸಿರು
ತಂಗಾಳಿ ಹಿಮಕೇಳಿ
ಒಮ್ಮೆ ಮಂದ್ರ ಮತ್ತೊಮ್ಮೆ ತಾರಕ
ಮಳೆಯು ಬದುಕಿನ ಹಾದಿ
ಹಾದಿ ನಮ್ಮಯ ಬದುಕು
ಹನಿಹನಿಯೆ ಸಾಗುತಿದೆ ನಮ್ಮ ಪಯಣ

Tropical Forests: Paths of Destruction and Regeneration in the Late Twentieth Century

ಬುಧವಾರ, ಮಾರ್ಚ್ 23, 2011

ಹೊಸದೂಟದಾಸೆ

ನಗದ ಹಿಂದಿದೆ ಜಗವು
ನೊಗವ ಮರೆತು
ನಗುವ ಮರೆತಿದೆ ಜನವು
ಮಾಯಾಮೃಗಕೆ ಸೋತು

ಮುಂದಿಲ್ಲ ಹಿಂದಿಲ್ಲ ಮಿಂಚಿನೋಟ
ವಿಷದ ಮುಳ್ಳುಗಳಿಗೆ ಸಂಚಿನೂಟ

ಮನೆ ಬದುಕು ಹಸಿರುಸಿರು ಯಾವುದಿಲ್ಲ
ಕೊನೆಯಿಲ್ಲದೋಟದಲಿ ಭಾಗಿ ಎಲ್ಲ

ಹಿಡಿದು ನಿಲ್ಲಿಸು ಗೆಳೆಯ ನಿನ್ನ ನೀನು
ಗಂಜಿಯೂಟದ ಬಿಸಿಯ ಮರೆತೆಯೇನು
ಮತ್ತೊಮ್ಮೆ ಆಡೋಣ ಚೆನ್ನೆಮಣೆಯ
ಹೊಸದೂಟ ಮಾಡೋಣ ಸುಗ್ಗಿ ಬೆಳೆಯ

One Man, One Cow, One Planet

ಭಾನುವಾರ, ಮಾರ್ಚ್ 6, 2011

ಲೆಕ್ಕದ ಪಾಠ ಮತ್ತು ಪ್ರಶ್ನೆ

ಪಾಠ ೧.
ಕಂಸಗಳು: ಆದಿ ಅಂತ್ಯವಿರುವ
ಒಡೆದ ಬಳೆಚೂರುಗಳ ಕಿಡಿಗೇಡಿತನ
ನೆನಪಿಸುವ
ಅಲ್ಲಲ್ಲೇ ಎರಡೆರಡು ಜೊತೆಗೂಡಿ
ಬಿಂದುವೊಂದನ್ನು ಬಂಧಿಯಾಗಿಸುವ
ಗಹಗಹಿಸುವ ಸ್ವಲ್ಪ ಕಿಡಿಗೇಡಿ ಮತ್ತು
ಅಷ್ಟೇ ವಕ್ರ ಬಾಹುಗಳ ಆಕೃತಿಗಳು.

ಇಂತಹ ಕಂಸನೊಬ್ಬನ ಸೆರೆಯಲ್ಲಿ
ಎಲ್ಲ ನೋವುಗಳನ್ನು ಅತ್ತು ಜಯಿಸಿ
ಎಂಟೊಂಬತ್ತು ಮಕ್ಕಳು ಮಾಡುವಷ್ಟು
ಏಕಾಂತವನ್ನು ವಸುದೇವ ದೇವಕಿಯರು
ಹೊಂದಿದ್ದರು ಎಂಬುದು ಪುರಾಣ

ಪಾಠ ೨.
ವೃತ್ತಗಳು:ಉರುಟುರುಟಾಗಿ ಸುಂದರವಾಗಿ
ಸೆಳೆಯುವ ಹಾಗೆ ಒಳಗೆ
ತುಂಬಿಕೊಳ್ಳುವ ತನ್ನ ಫರಿಯಿಂದ
ಎಲ್ಲರನ್ನೂ ದಿನೇ ದಿನೇ ಆಕ್ರಮಿಸಿಕೊಳ್ಳುತ್ತಿರುವ
ಮೌನ ಕುಣಿಕೆ.

ನಮ್ಮ ನಮ್ಮವೃತ್ತಗಳಲ್ಲಿ
ನಮ್ಮ ನಮ್ಮ ’ವ್ಯಾಸ’ರಿಗೆ
ಜೋತುಬೀಳುತ್ತಾ
ನಮ್ಮ ನಮ್ಮ ಫರಿಧಿಯೊಳಗೆ
ಉಸಿರುಗಟ್ಟಿಸಿಕೊಳ್ಳುತ್ತಾ
ಸತ್ತಂತೆ ಬದುಕುತ್ತಿರುವ  ನಮ್ಮದು
ತೆರೆದ ವರ್ತಮಾನ

ಅಭ್ಯಾಸದ ಪ್ರಶ್ನೆ:
ಹಾಗಾದರೆ ಸೆರೆ ಎಂದರೇನು?