ಗುರುವಾರ, ಜೂನ್ 13, 2013

ಇರುವೆ -ಇರವು- ಅರಿವೆ- ಅರಿವು

ನನ್ನ ಇರವಿಗೂ
ಈ ಇರುವೆಯ ಇರವಿಗೂ
ಇರುವ ವ್ಯತ್ಯಾಸವೆಂದರೆ,
 ನನಗೆ ನನ್ನ ಅರಿವಿಲ್ಲ,
ಇರುವೆಗೆ ಅದರ ಪರಿವಿಲ್ಲ

ನನ್ನ ಪ್ರಪಂಚ
ನನ್ನ ಪರಿಧಿಯದ್ದೆ
ಪರಿಧಿ ಅರಿವಿನದ್ದೆ
ಆದರೆ ನನ್ನರಿವಿಗೇ ಪರಿಯಿಲ್ಲ
ಅರಿಯದಿದ್ದುದಕ್ಕೆ ಪಾರವಿಲ್ಲ

ಬರಿದೆ ಇರುವಿನ ಕುರಿತು
ಇರುಳಿಡೀ ಕೊರೆದುಕೊಂಡು
ಮಲಗಿ ಏಳುವ ಮೊದಲೇ
ಇರುವೆಯ ಹುತ್ತ ನನ್ನನ್ನೂ ಮೀರಿ
ಮೇಲೆದ್ದಿದೆ!

ನಾನೂ ಇರುವೆ!
ಇಲ್ಲಿಯೆ!
ನನ್ನ ಪರಿಧಿಯಲ್ಲಿಯೆ!