ಮಂಗಳವಾರ, ಡಿಸೆಂಬರ್ 8, 2015

ಗುಮ್ಮನ ಕರೆದಳು ಅಮ್ಮಅಮ್ಮ ನಾನು
ಹಾರಬೇಕು
ಹಕ್ಕಿ ಹಾರಿದಂತೆ
ಕಾಮನ ಬಿಲ್ಲಲಿ
ಕೂರಬೇಕು
ಮರೆತು ಪಾಠದ ಚಿಂತೆ

ಮಗುವೇ ನೀನು
ಓದಬೇಕು
ಯಾರೂ ಓದದಂತೆ
ಕಾರು ಓಡಿಸಿ
ಮೆರೆಯಬೇಕು
ಭೂಮಿಗೆ ರಾಜನಂತೆ

ಭೂಮಿಗೆ ರಾಜನಾದರೆ ಸಾಕೇ
ಬಾನೂ ನನ್ನದಲ್ಲ
ಮಳೆಯ ತರುವ ಮೋಡಕೊಂದು
ಮನೆ ಕಟ್ಬೇಕಲ್ಲ

ತಲೆಹರಟೆ ನೀ
ಮಾಡಬೇಡ
ನಾ ಹೇಳಿದ್ದನ್ನ ಕೇಳು
ನೇರ ನಿಂತ್ಕೋ ಚಡ್ಡಿ ಹಾಕ್ಕೋ
ಟೈ ಕಟ್ತೀನಿ ತಾಳು

ಕುತ್ತಿಗೆ ಕಟ್ಟಿ
ಮೆತ್ತಗೆ ತಟ್ಟಿ
ಶಾಲೆಗೆ ಕಳಿಸಿದಳಮ್ಮ
ಪುಟ್ಟನ ಕನಸು
ಪೆಟ್ಟಿಗೆ ಸೇರಿತು
ಗುಮ್ಮನ ಕರೆದಳು ಅಮ್ಮ

ಭಾನುವಾರ, ನವೆಂಬರ್ 29, 2015

ಜೀವನ ಬತ್ತುವುದಿಲ್ಲಇಲ್ಲಿ ಆರಿ ಹೋಗಿದ್ದು
ಇನ್ನೆಲ್ಲೋ ಮೋಡ ಕಟ್ಟಿ
ಮಳೆಯಾಗದೇ ಹೋಗುವುದಿಲ್ಲ

ಇಂದು ಇಂಗಿದ್ದು
ಇನ್ನೆಂದೋ ಚಿಲುಮೆಯಾಗಿ
ಚಿಮ್ಮದಿರುವುದಿಲ್ಲ

ತೊರೆದದ್ದು ತೊರೆಯಾಗುವ
ಹರಿದದ್ದು ಹೊಳೆಯಾಗುವ
ಅಲೆದದ್ದು ನೆಲೆಕಾಣುವ ಸಾಗರ
ನೀ ಕಾದು ಕರೆದ ಮಹಾಪೂರ

ಭಾನುವಾರ, ನವೆಂಬರ್ 22, 2015

ಚಿರನಿಯಮ

ನೋಡಿರುವೆ
ಗತಕಾಲದಿಂದಲೂ
ಚರಿತ್ರೆಯ ಪುಟಗಳಲ್ಲಿ
ಪಟ್ಟಾಭಿಷೇಕವಾಗಿ
ಮೆರೆದವರ
ಗೆದ್ದವರ ಹಿಂದಿನ
ಹೊಗಳುಭಟ್ಟರ
ಸೋತವರ ತುಳಿದ
ನೀಚ ಭೃಷ್ಟರ
ಯಾವುದೂ
ಚಿರವಲ್ಲ ಧರೆಯಲಿ
ಇಂದಿಗೂ ನೋಡುತ್ತಿರುವೆ
ಅವರವರ ಪಾತ್ರದಲ್ಲಿ
ಅವರವರು...
ಭಿಡೆ ಬಿಟ್ಟು
ಭಾಗವತನ ತಾಳಕ್ಕೆ
ಹೆಜ್ಜೆ ಇಡುವುದೇ
ಚಿರನಿಯಮ

ಭಾನುವಾರ, ನವೆಂಬರ್ 15, 2015

ಕನಸುಗಾರ ಮತ್ತು ಕಲೆಗಾರನಾನು
ಕನಸುಗಾರ
ಸುಮ್ಮನೇ
ಚುಕ್ಕಿಗಳ
ಬೀಜ ಬಿತ್ತಿ
ಸಾಗುತ್ತೇನೆ

ನೀರುಣಿಸಿ
ಬೆಳಕು ಕೊಟ್ಟು
ರಂಗೋಲಿ
ಬೆಳೆವ ಕಲೆಗಾರ
ಬೇರಿದ್ದಾನೆ

ಬುಧವಾರ, ನವೆಂಬರ್ 11, 2015

ಸೂ.. ಸುರು ಸುರು

ಆಯುಷ್ಯವೇ ತಿಳಿಯದೇ
ಕಳೆದುಹೋಗಬಹುದು
ನೀನೀಗ ಬಂದರೆ
ಕಳೆಯುವ ಕೊಡುವ
ಕೆಲಸ ನಿನಗೆ ಬಿಟ್ಟಾಗಿದೆ

ಕೂಡಿಸಿದ ಕೊಲಾಜೋ
ಕುಲಾಂತರದ ಮುಲಾಜೋ
ಎಲ್ಲ ನಿನ್ನ ಆಯ್ಕೆ

ಬಣ್ಣ ಸುಣ್ಣ ಬೇಡಬಿಡು
ನಕ್ಕು ನಗಿಸಿಬಿಡು
ಬಿಡಿ ಸುರುಸುರುಬತ್ತಿ ಬಡಜೀವ
ತನ್ನ ತಾನು ಬದುಕಿಸಿಕೊಳ್ಳಲಿ
ಬರಿದೆ ಬೆಳಕ ಸೋಕಿಬಿಡು

ಮಂಗಳವಾರ, ನವೆಂಬರ್ 10, 2015

ಸಂಧ್ಯಾವಂದನೆಎದೆ ಗೂಡ
ಹಕ್ಕಿಗೆ
ಹಾಲು ನೀರಲ್ಲ
ಬೆಳಕ ಕೊಡು
ಹಾರಲು ರೆಕ್ಕೆಯಿದೆ
ಗೂಡಬಾಗಿಲ
ತೆರೆದಿಡು
ಬಾನು ಬಯಲ
ಚಾಚಿದೆ
ಬೆಳಕಿನ ಹಣ್ಣಿನ
ಹಸಿವ ಕೊಡು
ಹೊನ್ನಿನರಮನೆ ಮೋಹ
ಕಾಡದಿರಲಿ
ಬೇಡ ಕಾಡುವ
ಬಲೆಯು ತಾಕದಿರಲಿ
ಬೇಕು ಹಲವುಗಳು
ತಾಕಿ ಸಾಯದಿರಲಿ
ನಿನ್ನ ನಗೆ ಬೆಳಕಿನೊಳಗೆ
ಹಕ್ಕಿ
ತತ್ತಿಯಿಡಲಿ
ಗುರುವೇ
ಹಾರಿಬಿಡು

ಶುಕ್ರವಾರ, ಅಕ್ಟೋಬರ್ 30, 2015

ಹುಟ್ಟು - ಗುಟ್ಟುಅಮ್ಮ ನಿನಗೆ ನೋವು ಕೊಡದೆ
ದಿನವೂ ಹುಟ್ಟುವುದು ಹೇಗೆ

ನೋಡು ದೂರ ಬಾನಿನಲ್ಲಿ
ಚಂದ್ರ ಹುಟ್ಟಿದ ಹಾಗೆ

ನೋವಿನಲ್ಲಿ ಸೋತಮೇಲೂ
ಹುಟ್ಟಿ ಬರಲಿ ಹೇಗೆ

ಅಲೆಗಳನ್ನು ಸೀಳಿ ನಾವೆ
ಹುಟ್ಟು ಕಂಡ ಹಾಗೇ

ಚಿಕ್ಕ ಮಗುವು ನಿನಗೆ
ದೊಡ್ಡ ನಗುವಾಯಿತು ಹೇಗೆ

ರವಿಯ ಕಿರಣ ಕತ್ತಲನ್ನು
ಸೀಳಿಬಂದ ಹಾಗೆ

ಶನಿವಾರ, ಅಕ್ಟೋಬರ್ 3, 2015

ಆಂಟಿಕ್ ಪೀಸುಗಳು


ಮನೆಯ ತುಂಬೆಲ್ಲ
ಆಂಟಿಕ್ ಪೀಸುಗಳು
ಹೊಸಸರಕಿಗೆಲ್ಲೂ
ಜಾಗ ಇಲ್ಲ

ಧೂಳು ಜೇಡನ ಬಲೆಯ
ಗೂಡು ತಾನಾದರೂ
ಪೊರಕೆ ಆಡಿಸಲಿಕ್ಕೆ
ಧೈರ್ಯ ಸಾಲ

ವರಲೆಗಳು ತಿಂದರೂ
ತುಕ್ಕು ತಾ ಹಿಡಿದರೂ
ಹಳೆಸರಕು ವ್ಯಾಮೋಹ
ಬಿಡುವುದಿಲ್ಲ

ಬೀದಿಯಲಿ ಮಲಗಿದರೂ
ಹಾದಿಯಲಿ ಉಂಡರೂ
ಹೊಸ ಬೆಳಕಿಗಿಲ್ಲಿ ನೆಲೆಯಿಲ್ಲ

ಆಂಟಿಕ್ ಪೀಸುಗಳು
ಬೆಲೆಬಾಳುವಂತವು
ನೂಲದಿದ್ದರೂ ಚರಕ
ಉಳಿಯಿತಲ್ಲ

ಮಂಗಳವಾರ, ಸೆಪ್ಟೆಂಬರ್ 15, 2015

ಭಿತ್ತಿಚಿತ್ರಮನೆಯ ಗೋಡೆಯು
ಬೇಡ ಚಿತ್ರವೆ
ನಿನಗೆ ಮನದ
ಗೋಡೆಯ ನೆಲೆಯಿದೆ
ನಿನ್ನ ನಗುವಿಗೆ
ಎದೆಯ ಮಡಿಲಿದೆ
ನನ್ನ ನೋವಿಗೆ ಬಲವಿದೆ
ನಿನ್ನ ಹಾಡಿಗೆ
ಹರಿವ ನದಿಯಿದೆ
ಒಲವು ತುಂಬಿದ ಕಡಲಿದೆ
ನಿನ್ನ ಬೆಳಕಿಗೆ ತೆರೆದ ಬಾನಿದೆ
ಹೂವು ತುಂಬಿದ ಕಾನಿದೆ
ಅಲ್ಲಿ ವಿಹರಿಸು
ಚೈತನ್ಯಹಂಸವೆ
ಅಂತರಾತ್ಮ ಪ್ರದೀಪವೇ 

ಸೋಮವಾರ, ಸೆಪ್ಟೆಂಬರ್ 14, 2015

ನಸುನಗೆಯಸಿಹಿಪಾಕರೋದನೆಯನ  ನೀರಿನಲಿ ಬಿದ್ದು
ಈಜಿ ದಡಸೇರಿ ಬದುಕಿರುವೆ

ಹಸಿವಿನ ಬೆಂಗಾಡಿನಲಿ ಸಿಕ್ಕಿ
ದುಡಿಮೆಯ ನದಿಗಿಳಿದು ಬದುಕಿಬಂದಿರುವೆ

ಬೆನ್ನಟ್ಟಿಬಂದ ಸಿಂಹ ಶಾರ್ದೂಲಗಳಿಗೆ
ಒಡಲ ಬೆಂಕಿಯ ತೋರಿ ಪಾರಾಗಿರುವೆ

ಕೊಲ್ಲಬಂದ ನನ್ನದೇ ನೆರಳುಗಳ
ಕನಸು ಬೆಳಕಿಂದ ದಮನಿಸಿರುವೆ

ಇದೀಗ ನಾ ನಿನ್ನ ನಸುನಗೆಯಪಾಕದಲಿ
ಬಿದ್ದ ಬಡಪಾಯಿ ಇರುವೆ

ನೀನೆತ್ತಿಕೊಳ್ಳದೇ ಮಮತೆಯಲಿ
ತೊಳೆಯದೇ ನಾನೆಲ್ಲಿ ಬದುಕಿ ಬರುವೆ

ಮಂಗಳವಾರ, ಸೆಪ್ಟೆಂಬರ್ 8, 2015

ರಾಸ ಪ್ರಾಸ

ಸಣ್ಣ ಆಸೆ
ಕೇಳು ಕೂಸೆ
ನಿನ್ನ ಹಾಡು ಕೇಳಲು

ಕಳ್ಳ ಶಾಮ
ಸುಳ್ಳರಾಮ
ನನ್ನ ಗಡಿಗೆಯ ನೀಡೆನು

ನಿನ್ನ ನಗುವು
ಬೆಣ್ಣೆಯಂತೆ
ನನ್ನ ಪಾಲು ನೀಡೆಯ

ಮೊಸರು ತಂಡುಲ
ನಿನ್ನ ಹಂಬಲ
ಗಡಿಗೆಯಲ್ಲಿ ಕಾಣೆಯ

ಗಡಿಗೆ ಬಿಟ್ಟು
ಉಡುಗೆ ತೋರೆ
ಎಷ್ಟು ಸುಂದರ ನವಿಲಿದೆ

ಬಿಟ್ಟರೊಡೆವುದು
ಚೆಲ್ಲಿ ಮಿಗುವುದು
ನಿನ್ನ ತಲೆಯ ಮೇಲೆ ಗರಿಯಿದೆ

ಕಾಡುಮೇಡನು
ಅಲೆದು ತಂದ
ಸಿಹಿಯ ಹಣ್ಣಿದೆ ನನ್ನಲಿ

ಹಣ್ಣಿಗಿಂತ
ಬಣ್ಣ ತುಂಬಿದ
ಮಾತು ಸಿಹಿಯಿದೆ ನಿನ್ನಲಿ

ನಾಚುವಂತೆ
ಮಾಡಬೇಡ
ಹೊಟ್ಟೆ ಹಸಿದ ಸಮಯದಿ

ದೋಚಿತಿನ್ನುವ
ಆಸೆ ಬಿಟ್ಟು
ಹಂಚಿ ತಿನ್ನುವ ಚಂದದಿ

ಕೊಳಲನೂದಲೆ
ನಿನ್ನ ಹಾಡಿಗೆ
ಜೇನು ಪಾಯಸ ಸವಿಯುತ

ನನ್ನದೇನಿದೆ
ನಿನ್ನ ಪಾಲಿದು
ಮುರಳಿ ನಾದವೇ ಜೀವಿತ

ಶುಕ್ರವಾರ, ಸೆಪ್ಟೆಂಬರ್ 4, 2015

ದೇವರೆ,ನೀನು ಬಹುಕಾಲ
ಮಳೆಗಾಳಿ ಬಿಸಿಲು
ಗುಡುಗು ಸೀತೋಷ್ಣಪಿತ್ಥಾದಿಗಳಿಂದ
ನರಳದಿರಲೆಂದು ನಿನ್ನ
ಕಲ್ಲಿನಲಿ ಕಡೆದಿಟ್ಟೆ

ಮಾನವ ಕೋಟಿಯ
ಪ್ರಾರ್ಥನೆಗಳೆಲ್ಲಾ ತುಂಬಲು
ಗೆರಸಿಯ ಕಿವಿಕೊಟ್ಟೆ

ನಮ್ಮಯ ಪಾಪ ಪುಣ್ಯಗಳ
ತೇಗಲು ಘನೋದರವ ಕೊಟ್ಟೆ

ಬರಿಯ ಗೋಳುಗಳ
ಕತೆಬೇಡೆಂದು ಬಗೆಬಗೆ
ಸ್ತುತಿಗಳ ಹಾಡುತ ಕುಳಿತುಬಿಟ್ಟೆ

ಕತ್ತಲಾಗಲು ನಿನ್ನ ನೋಡಲು
ದೀಪವ ಹಚ್ಚಿಟ್ಟೆ

ಸ್ತುತಿಗಳ ಮತ್ತಲಿ
ಮೈಮರೆಯದಂತೆ
ಶಂಖ ಜಾಗಟೆಗಳ
ದಿನ ಬಡಿದಿಟ್ಟೆ

ನಿನ್ನ ಪ್ರೀತಿಸುವ
ಪರಿಯನು ತಿಳಿಯದೆ
ಪಂಚೋಪಚಾರ ಪೂಜೆಗಳ
ಮಡುತ ಕುಳಿತುಬಿಟ್ಟೆ

ನೀನೋ
ನಿರಾಕಾರ
ನಿರ್ಗುಣ
ನಿರ್ವಿಕಲ್ಪ
ನಿರ್ವಿಕಾರ
ನಿರುದ್ದೇಶಕ
ನಿರುದ್ಯೋಗಿ
ನಿರ್ದೇಶಕನೆಂಬುದ
ತೋರುತ ಕುಳಿತುಬಿಟ್ಟೆ

ಬುಧವಾರ, ಸೆಪ್ಟೆಂಬರ್ 2, 2015

ಸಾಕುಒಂದು
ಕಿರಣ
ಸಾಕು
ಎದೆ ಹೂವ
ಜೀವಕೆ

ಒಂದು
ಕನಸು
ಬೇಕು
ಕಣ್ಣೀರ
ದಮನಕೆ

ನೀ
ನಗುವ
ಬೆಳಕು
ಸಾಕು
ಜಗದೆಲ್ಲ ಬಣ್ಣಕೆ


ಮಂಗಳವಾರ, ಸೆಪ್ಟೆಂಬರ್ 1, 2015

ಮನದ ಒಗಟುಏನು
ಹಾಡುತಿರುವೆ
ಮನವೇ ನನಗೆ
ಚೂರೂ
ತಿಳಿಯುತಿಲ್ಲ

ತಂತಿಯಲ್ಲಿ
ಮಿಡಿದ ರಾಗ
ಬುರುಡೆ ಸೇರುತಿಲ್ಲ

ನಗುವ ಹೂವ
ದಾಟಿ ಮುಂದೆ
ಜಗವು ಕಾಣುತಿಲ್ಲ

ನನ್ನ ದೃಷ್ಟಿತಾಕಿ
ಸೊರಗದಂತೆ
ಕಾಯತಿಳಿಯುತಿಲ್ಲ

ಬಾಡದಂತೆ
ನೋಯದಂತೆ
 ಹೂವ ನಗೆಯ
ತುಂಬಿ ಒಯ್ಯಬೇಕು

ಅರವಿಂದಮುಖನ
ಪಾದಪದುಮದಲ್ಲಿ
ಕರಗಬೇಕು

🌷🌷🌷🌷🌷🌷🌷🌷🌷