ಭಾನುವಾರ, ನವೆಂಬರ್ 29, 2015

ಜೀವನ ಬತ್ತುವುದಿಲ್ಲಇಲ್ಲಿ ಆರಿ ಹೋಗಿದ್ದು
ಇನ್ನೆಲ್ಲೋ ಮೋಡ ಕಟ್ಟಿ
ಮಳೆಯಾಗದೇ ಹೋಗುವುದಿಲ್ಲ

ಇಂದು ಇಂಗಿದ್ದು
ಇನ್ನೆಂದೋ ಚಿಲುಮೆಯಾಗಿ
ಚಿಮ್ಮದಿರುವುದಿಲ್ಲ

ತೊರೆದದ್ದು ತೊರೆಯಾಗುವ
ಹರಿದದ್ದು ಹೊಳೆಯಾಗುವ
ಅಲೆದದ್ದು ನೆಲೆಕಾಣುವ ಸಾಗರ
ನೀ ಕಾದು ಕರೆದ ಮಹಾಪೂರ

ಭಾನುವಾರ, ನವೆಂಬರ್ 22, 2015

ಚಿರನಿಯಮ

ನೋಡಿರುವೆ
ಗತಕಾಲದಿಂದಲೂ
ಚರಿತ್ರೆಯ ಪುಟಗಳಲ್ಲಿ
ಪಟ್ಟಾಭಿಷೇಕವಾಗಿ
ಮೆರೆದವರ
ಗೆದ್ದವರ ಹಿಂದಿನ
ಹೊಗಳುಭಟ್ಟರ
ಸೋತವರ ತುಳಿದ
ನೀಚ ಭೃಷ್ಟರ
ಯಾವುದೂ
ಚಿರವಲ್ಲ ಧರೆಯಲಿ
ಇಂದಿಗೂ ನೋಡುತ್ತಿರುವೆ
ಅವರವರ ಪಾತ್ರದಲ್ಲಿ
ಅವರವರು...
ಭಿಡೆ ಬಿಟ್ಟು
ಭಾಗವತನ ತಾಳಕ್ಕೆ
ಹೆಜ್ಜೆ ಇಡುವುದೇ
ಚಿರನಿಯಮ

ಭಾನುವಾರ, ನವೆಂಬರ್ 15, 2015

ಕನಸುಗಾರ ಮತ್ತು ಕಲೆಗಾರನಾನು
ಕನಸುಗಾರ
ಸುಮ್ಮನೇ
ಚುಕ್ಕಿಗಳ
ಬೀಜ ಬಿತ್ತಿ
ಸಾಗುತ್ತೇನೆ

ನೀರುಣಿಸಿ
ಬೆಳಕು ಕೊಟ್ಟು
ರಂಗೋಲಿ
ಬೆಳೆವ ಕಲೆಗಾರ
ಬೇರಿದ್ದಾನೆ

ಬುಧವಾರ, ನವೆಂಬರ್ 11, 2015

ಸೂ.. ಸುರು ಸುರು

ಆಯುಷ್ಯವೇ ತಿಳಿಯದೇ
ಕಳೆದುಹೋಗಬಹುದು
ನೀನೀಗ ಬಂದರೆ
ಕಳೆಯುವ ಕೊಡುವ
ಕೆಲಸ ನಿನಗೆ ಬಿಟ್ಟಾಗಿದೆ

ಕೂಡಿಸಿದ ಕೊಲಾಜೋ
ಕುಲಾಂತರದ ಮುಲಾಜೋ
ಎಲ್ಲ ನಿನ್ನ ಆಯ್ಕೆ

ಬಣ್ಣ ಸುಣ್ಣ ಬೇಡಬಿಡು
ನಕ್ಕು ನಗಿಸಿಬಿಡು
ಬಿಡಿ ಸುರುಸುರುಬತ್ತಿ ಬಡಜೀವ
ತನ್ನ ತಾನು ಬದುಕಿಸಿಕೊಳ್ಳಲಿ
ಬರಿದೆ ಬೆಳಕ ಸೋಕಿಬಿಡು

ಮಂಗಳವಾರ, ನವೆಂಬರ್ 10, 2015

ಸಂಧ್ಯಾವಂದನೆಎದೆ ಗೂಡ
ಹಕ್ಕಿಗೆ
ಹಾಲು ನೀರಲ್ಲ
ಬೆಳಕ ಕೊಡು
ಹಾರಲು ರೆಕ್ಕೆಯಿದೆ
ಗೂಡಬಾಗಿಲ
ತೆರೆದಿಡು
ಬಾನು ಬಯಲ
ಚಾಚಿದೆ
ಬೆಳಕಿನ ಹಣ್ಣಿನ
ಹಸಿವ ಕೊಡು
ಹೊನ್ನಿನರಮನೆ ಮೋಹ
ಕಾಡದಿರಲಿ
ಬೇಡ ಕಾಡುವ
ಬಲೆಯು ತಾಕದಿರಲಿ
ಬೇಕು ಹಲವುಗಳು
ತಾಕಿ ಸಾಯದಿರಲಿ
ನಿನ್ನ ನಗೆ ಬೆಳಕಿನೊಳಗೆ
ಹಕ್ಕಿ
ತತ್ತಿಯಿಡಲಿ
ಗುರುವೇ
ಹಾರಿಬಿಡು