ಶನಿವಾರ, ಜನವರಿ 30, 2010

ಹೊಟ್ಟೆಹಾಡು

ಹೊಟ್ಟೆಯಿಂ ಗಣಪನೂ
ಹೊಟ್ಟೆಯಿಂ ಠೊಣಪನೂ
ಹೊಟ್ಟೆ ತಾ ಹಿರಿದು ಸಕಲ ಜೀವರಾಶಿಗಳಲೆಲ್ಲ!

ಹೊಟ್ಟೆಯಲೆ ಹರಿದಿಹುದು
ಜಗವ ಹೊತ್ತಿಹ ಹಾವು
ಬಿರಿವ ಜೀವನಕೆಲ್ಲ ಹೊಟ್ಟೆಯದೆ ಕಾವು!

ಹೊಟ್ಟೆಗಾಗಿಯೆ ಜನರು ಉತ್ತಿ ಬಿತ್ತುವರಣ್ಣ
ಹೊಟ್ಟೆ ಮೀರಲು ಬರಿದೆ ಬಿದ್ದು ಸಾಯುವರಣ್ಣ
ಹೊಟ್ಟೆಪಾಡಿಗೆ ಗಟ್ಟಿ ನಿಂತು ಬದುಕುವ ಜಾಣ!

ರಟ್ಟೆಯಿಂದಲೆ ಹೊಟ್ಟೆ ತುಂಬುತಿರಲಿ
ಎದೆಯಮೀರುತ ಕೆಟ್ಟು ಬೆಳೆಯದಿರಲಿ
ಹೊಟ್ಟೆ ಹಾಡಿಗೆ ದಿನವೂ ರವಿ ಅರಳಲಿ!

ಬುಧವಾರ, ಜನವರಿ 20, 2010

ಬಾಲಿಶ

ಕಾಣದ ಜತೆಗಾರ
ಕಾಡುವ ಜಲಗಾರ
ಕಡಲ ತಳಮಳವಾವುದೋ



ಕಂಗಳ ಕಲೆಗಾರ
ನದಿಗಳ ನೇಕಾರ
ಹರಿವ ಹಂಬಲವೇನದೋ

ನೇಸರನ ನಗಿಸುವನೆ
ಕೂಸುಗಳ ಅಳಿಸುವನೆ
ಸೂಸಿದ ಸೊಬಗೆಂಥದೋ

ಒಳಗೆಲ್ಲ ಆಡುತ್ತ
ಹೊರಗೆಲ್ಲ ಕಾಡುತ್ತ
ಜರಗುವ ಪರಿ ಎಂಥದೋ

ಶನಿವಾರ, ಜನವರಿ 9, 2010

ಸೀಳು!


ಹುಣ್ಣಿಮೆಯ ಮೌನಕ್ಕೆ
ಶ್ವಾನದ ಸೀಳು
ತನ್ನ ನೆರಳಿಗೆ ಹಲುಬಿ
ಗೋಳಿಡುವ ಬಾಳು

ಚಂದ್ರ ಧರ್ಮದ ದೀಪ
ನೆರಳು ಭೂತದ ಪಾಪ
ಹಿರಿದು ಇರಿದೀತೇನೋ
ಎಂಬೊಡಲ ಪರಿತಾಪ

ಇಂತು ನಾಯಿಯ ಮಾಯೆ
ಕಾಡುತ್ತಲಿಹುದು
ನಾಡುನಾಡನೆ ನಾಯಿ
ಕಾಯುತ್ತಲಿಹುದು
ಬಡಜನರ ಒಡಲಿನುರಿ ನಭವ ತಟ್ಟಿಹುದು


ಶನಿವಾರ, ಜನವರಿ 2, 2010

ಸಹಜ



ಮಾತನಾಡದೆ
ಮೌನವಾಗದೆ
ಕವನಗಳು ಹಾಡಿದವು

ಚಿಮ್ಮಲಾರದೆ
ಚೆಲ್ಲಲಾರದೆ
ಚಿತ್ತಾರ ಮೂಡಿದವು

ಸುಮ್ಮನಾಗದೆ
ಘಮ್ಮೆನ್ನಲಾಗದೆ
ಕುಸುಮಗಳು ಅರಳಿದವು

ತಣಿಸಲಾರದೆ
ಮನ ಮಣಿಸಲಾರದೆ
ಮಳೆಬಿಂದುಗಳು ಉದುರಿದವು

ಸದ್ದು ಇಲ್ಲದೆ
ಸನ್ನೆ ಇಲ್ಲದೆ
ಭಾವಗಳು ಹರಿದಾಡಿದವು

ಅವನೂ ಸುಮ್ಮನೆ
ಅವಳೂ ಸುಮ್ಮನೆ
ಹೆಜ್ಜೆಗಳು ಸಾಗಿದವು