ಬುಧವಾರ, ನವೆಂಬರ್ 28, 2012

ಎಲ್ಲಿದೆ?



ಕಪ್ಪು ಮಣ್ಣು
ಬಿಳಿಯ ಮೊಳಕೆ
ಹಸಿರು ಜೀವ
ಮಳೆಯ ಹರಕೆ

ನೀಲಿ ಬಾನು
ಬಾನ ಕಣ್ಣು
ಕಣ್ಣ ಬೆಳಕು
 ಬೆಳಕು ಒಂದೆ
 ಬಣ್ಣ ನೂರು

ಬೆಳಕು ಬಣ್ಣ
ಬಣ್ಣ ಹೂವು
ಚಿಟ್ಟೆ ನಾವು
ನಾವು ನೀವು

ಕಾಲ ಕಾಲು
ನಿಲ್ಲದಾಳು
ನಿನ್ನೆ ನಾಳೆ
ಎಲ್ಲಿ ಹೇಳು

ಮಣ್ಣಿನಿಂದ ಬಣ್ಣವಾಗಿ
ಬಣ್ಣದಿಂದ ಬಾನಿಗೇರಿ
ಬಾನಿನಲ್ಲಿ ಬೆಳಕಸೇರಿ
ಬೆಳಕು ಬಣ್ಣ ತೆರೆದಿದೆ
ಎಲ್ಲ ತನ್ನತನವೆ ಮೆರೆದಿದೆ 
ಇಲ್ಲಿ ಎಲ್ಲಿ ನನ್ನ ತನವಿದೆ?

ಬುಧವಾರ, ಸೆಪ್ಟೆಂಬರ್ 26, 2012

ಹಣತೆ

ಹಣತೆ
ಸಣ್ಣ ಅಳತೆ
ಬೆಳಕು ಕತ್ತಲ ಕವಿತೆ

ಕವಿತೆ
ಎದೆಯ ಒರತೆ
ಸಾಗರದ ತೊದಲು ಕಂಡಿತೆ ?

ಕಂಡಿದ್ದು ತಿಳಿವಂತೆ
ಕಾಣದ್ದು ಹೊಳೆವಂತೆ
ಸಾಲು ಸಾಲು ಹಣತೆ

ಹಣತೆ
ಕಣ್ಣ ಕವಿತೆ
ನಕ್ಕಲ್ಲೆಲ್ಲಾ ನೂರು ಒಲವಿನೊರತೆ

ಸೋಮವಾರ, ಆಗಸ್ಟ್ 27, 2012

ಯಥಾರ್ಥ




ಅರ್ಥದ ಅಮಲಿಗೆ
ಬಲಿಯಾಗಿ ಕದಡಿ ಹೋದರೀಗ
ತಿಳಿಯಾಗುವುದು ಹೇಗೆ
ತಿಳಿವಾಗುವುದು ಹೇಗೆ
ಹೊಳೆಯುವುದು ಹೇಗೆ
ಹೊಳೆಯಾಗಿ ಹರಿಯುವುದು ಹೇಗೆ

ಅರ್ಥ ತಾನಿತ್ತೆ?
ಮಾತು ಹುಟ್ಟುವ ಮೊದಲು
ವ್ಯರ್ಥವಾಗಿತ್ತೆ?
ಮೌನಜಪಿಸಿದ ಮಂತ್ರ
ಬೀಜ ಮೊಳೆತಿತ್ತೆ?

ಶಬ್ದ ಶಬ್ದವೂ ಮಾಯೆ
ಮರುಳು ಬೇಕೆ?
ಅಳುವ ಮಗುವಿರೆ
ತಾಯ್ಗೆ ಸೆರಗು ಬೇಕೆ?
ದನಿಯ ಮೀರಿದ ಅರ್ಥ
ಒಲಿಯಬೇಕೆ?

ಗುರುವಾರ, ಜುಲೈ 26, 2012

ವಲ್ಮೀಕ ಸ್ತುತಿ



ಹೊನ್ನ ಜಿಂಕೆ
ಜಿಂಕೆ ಕಣ್ಣು
ಕಣ್ಣ ಕಾಡಿಗೆ
ಕಾಡಿ ಕಾಡಿಗೆ
ಕಾಡ ಜಾಡಿಗೆ
ಹಾ ಲಕ್ಷ್ಮಣಾ...
ಸೀತೆ ಲಂಕೆಗೆ
ಜನರ ಶಂಕೆಗೆ
ಶಂಕೆ ಬೆಂಕಿಗೆ
ಬೆಂಕಿ ಬಾಯಿಗೆ
ಬದುಕು ಕಾಡಿಗೆ
ಕಣ್ಣು ಕಾಡಿಗೆ
ಕಾಡ ಕಣ್ಣಿಗೆ
ಕಣ್ಣನೀರಿಗೆ
ನೀರ ನೀರೆಗೆ
ಬಾಯಾರ್ದ ನೀರೆಯರಸಗೆ
ರಸರಾಮಕತೆಗೆ
ರಸ ಸರಸ ಋಷಿಗೆ
ಋಷಿಯ ಹುಂತಿಗೆ
ಹುಂತಿನ ತಂತಿಗೆ
ತಂತಿನ ಹಸೆಗೆ
ಒರೆದು ಬಂದೆ
ಎರಗಿ ಬಂದೆ
ಹರಸು ತಂದೆ

ಶುಕ್ರವಾರ, ಜೂನ್ 15, 2012

ಭಾನುವಾರ, ಫೆಬ್ರವರಿ 12, 2012

ಕನಸಿನ ಕಡಲು

ಕನಸಿನ ಕಡಲಲ್ಲಿ
ಕಡಲ ಕನಸುಗಳಿವೆ
ಮರುಳು ಮನದಲ್ಲಿ
ಮರಳ ಹರಳುಗಳಿವೆ

ಹನಿಗಳಾಗಿ ಹುಟ್ಟಿ
ತೊರೆಗಳಾಗಿ ಹರಿದು
ನದಿಗಳಾಗಿ ಝರಿದು
ಭೋರ್ಗರೆಯುತ್ತಲಿದೆ
ಅವಿರತ ಭಾವದುನ್ಮಾದ

ಕಡಲ ಕಡಗೋಲಿನಲಿ
ಮತ್ತೆ ಧ್ಯಾನಕೆ ಸಿಲುಕಿ
ಊರ್ಧ್ವಮುಖಿಯಾಗಿದೆ
ಅರಿಯದಂತ ನಾದ

ಶನಿವಾರ, ಜನವರಿ 21, 2012

ಗೋವಂಶ

ಗೋವಿನ ಹಾಡನು
ಗುನುಗುತ ಬೆಳೆದೆವು
ನಮ್ಮದು ಗೋವಂಶ

ಮುರಳಿಯ ಗಾನಕೆ
ಮರುಳಾಗಿರುವೆವು
ಮರಳುವ ನಮ್ಮಯ ಯುಗಪುರುಷ

ಕೆಚ್ಚಲು  ತೀಡಲು
ಅರಳಿದ ಸುಮಗಳು
ನಮ್ಮಯ ವೇದಗಳು

ಕೆಚ್ಚಿಗೆ ಬಿದ್ದರೆ
ಮೃತ್ಯುಂಜಯರು ನಾವೇ
ಸಿಂಹಕೆ ಸಿಂಹಗಳು

ದಾಸೋಹಗಳು ಅವಿರತ
ನಡೆದಿವೆ ನಮ್ಮಯ ನಾಡಲ್ಲಿ
ಕೇಸರಿ ಜ್ವಾಲೆಯ ಒಲೆಗಳು
ನಗುತಿವೆ ಎಲ್ಲರ ಮನೆಯಲ್ಲಿ

ನಗುತಿದೆ ಬಾವುಟ
ಕಣ್ಣನು ಮಿಂಚಿಸಿ
ಬಾನಿಗೆ ಮೈಚಾಚಿ

ಮೂರು ಬಣ್ಣಗಳ
ನೂರ್ಕೋಟಿ ಬೆಳಕುಗಳ
ನಡುವಲಿ ಕೋರೈಸಿ

ಧ್ವಜವೇ ಸಹಸ್ರಾರ
ಕಂಬವೇ ಪುರ
ಬಲಿಪೀಠವೇ ಮೂಲಾಧಾರ

ನಮ್ಮದೊಂದು ಹಿಡಿ
ನಿಮ್ಮದೊಂದು ಹಿಡಿ
ಮೀರಲಿ ಮುಗಿಲಿನ ತೀರ.