ಭಾನುವಾರ, ಫೆಬ್ರವರಿ 28, 2010

ಸಂಜೆಯಾಗುವುದೆಂದಿಗೆ?

ಭುವಿಯ ನಾಚಿದ ಮೊಗದಿ ರವಿತಿಲಕ ಹೊಳೆವಂತೆ
ಸಂಜೆಮಲ್ಲಿಗೆ ಮುತ್ತು ಮಣಿ ನಕ್ಷತ್ರವರಳುವಂತೆ
ಚಿನ್ನ ಕರಗಿದಂತೆ ಕವಿವ ಕತ್ತಲೆಯ ಕವಿಯಾಗೆ ಬೆಳ್ಳಿಚಂದಿರ ಇಣುಕುವಂತೆ
ಹಕ್ಕಿಯಂದದಿ ಬದುಕು ಚಿಲಿಪಿಲಿಸಿ ಎದೆಗೂಡ ಸೇರುವಂತೆ
ಸಂಜೆಯಾಗುವುದೆಂದಿಗೆ?

ಇಂದು ಕಾಡಿದ ಕನಸು, ಇಂದು ನೋಡಿದ ನವಿಲು
ಇಂದು ಗೀರಿದ ಗಾಯ- ಇಂದೇರಿ ಮೆಟ್ಟಿದ ಮೆಟ್ಟಿಲು
ತಮ್ಮದೇ ನೋವಿನಲಿ ತಮ್ಮದೇ ತಾಳದಲಿ
ತಮ್ಮದೇ ನಲಿವುಗಳ ಸ್ವಪ್ನಮೇಳದಲಿ
ಗುಂಪು ಗುಂಪಾಗಿ ಗುನುಗುತ್ತ ಒಡಲ ಸೇರುತಲಿ
ನಾಳಿನರುಣೋದಯಕ್ಕೆ ಹೋಚೆಲ್ಲಿ ಮಲಗುವ
ಸಂಜೆಯಾಗುವುದೆಂದಿಗೆ?

ಅದೇ ಭೂಮಿ ಅದೇ ಭಾನು
ಅದೇ ಮನಸು ಅದೇ ಕಣ್ಣು
ಕ್ಷಣಕ್ಷಣವೂ ನವಚಿತ್ರ ವರ್ಣಶೃಂಗಾರ
ಸಾಕ್ಷಿಗೊಬ್ಬನೆ ಸುಪುತ್ರ ಆತ್ಮನೆನ್ನುವ ಮಿತ್ರ
ಅವನವ್ಯಕ್ತದುದ್ಗಾರವೀ ವರ್ಣಚಿತ್ರ
ಆಕಾಶಗಂಗೆಯಲವ ಧೃವನಾಗಿ ಮಿಂಚುವ
ಮಂಜುಮುಸುಕಿದ ಬಣ್ಣ ಕಣ್ಣಾಗಿ ಕಾಣುವ
ರಸ ಸಂಜೆಯಾಗುವುದೆಂದಿಗೆ?

ಶನಿವಾರ, ಜನವರಿ 30, 2010

ಹೊಟ್ಟೆಹಾಡು

ಹೊಟ್ಟೆಯಿಂ ಗಣಪನೂ
ಹೊಟ್ಟೆಯಿಂ ಠೊಣಪನೂ
ಹೊಟ್ಟೆ ತಾ ಹಿರಿದು ಸಕಲ ಜೀವರಾಶಿಗಳಲೆಲ್ಲ!

ಹೊಟ್ಟೆಯಲೆ ಹರಿದಿಹುದು
ಜಗವ ಹೊತ್ತಿಹ ಹಾವು
ಬಿರಿವ ಜೀವನಕೆಲ್ಲ ಹೊಟ್ಟೆಯದೆ ಕಾವು!

ಹೊಟ್ಟೆಗಾಗಿಯೆ ಜನರು ಉತ್ತಿ ಬಿತ್ತುವರಣ್ಣ
ಹೊಟ್ಟೆ ಮೀರಲು ಬರಿದೆ ಬಿದ್ದು ಸಾಯುವರಣ್ಣ
ಹೊಟ್ಟೆಪಾಡಿಗೆ ಗಟ್ಟಿ ನಿಂತು ಬದುಕುವ ಜಾಣ!

ರಟ್ಟೆಯಿಂದಲೆ ಹೊಟ್ಟೆ ತುಂಬುತಿರಲಿ
ಎದೆಯಮೀರುತ ಕೆಟ್ಟು ಬೆಳೆಯದಿರಲಿ
ಹೊಟ್ಟೆ ಹಾಡಿಗೆ ದಿನವೂ ರವಿ ಅರಳಲಿ!

ಬುಧವಾರ, ಜನವರಿ 20, 2010

ಬಾಲಿಶ

ಕಾಣದ ಜತೆಗಾರ
ಕಾಡುವ ಜಲಗಾರ
ಕಡಲ ತಳಮಳವಾವುದೋ



ಕಂಗಳ ಕಲೆಗಾರ
ನದಿಗಳ ನೇಕಾರ
ಹರಿವ ಹಂಬಲವೇನದೋ

ನೇಸರನ ನಗಿಸುವನೆ
ಕೂಸುಗಳ ಅಳಿಸುವನೆ
ಸೂಸಿದ ಸೊಬಗೆಂಥದೋ

ಒಳಗೆಲ್ಲ ಆಡುತ್ತ
ಹೊರಗೆಲ್ಲ ಕಾಡುತ್ತ
ಜರಗುವ ಪರಿ ಎಂಥದೋ

ಶನಿವಾರ, ಜನವರಿ 9, 2010

ಸೀಳು!


ಹುಣ್ಣಿಮೆಯ ಮೌನಕ್ಕೆ
ಶ್ವಾನದ ಸೀಳು
ತನ್ನ ನೆರಳಿಗೆ ಹಲುಬಿ
ಗೋಳಿಡುವ ಬಾಳು

ಚಂದ್ರ ಧರ್ಮದ ದೀಪ
ನೆರಳು ಭೂತದ ಪಾಪ
ಹಿರಿದು ಇರಿದೀತೇನೋ
ಎಂಬೊಡಲ ಪರಿತಾಪ

ಇಂತು ನಾಯಿಯ ಮಾಯೆ
ಕಾಡುತ್ತಲಿಹುದು
ನಾಡುನಾಡನೆ ನಾಯಿ
ಕಾಯುತ್ತಲಿಹುದು
ಬಡಜನರ ಒಡಲಿನುರಿ ನಭವ ತಟ್ಟಿಹುದು


ಶನಿವಾರ, ಜನವರಿ 2, 2010

ಸಹಜ



ಮಾತನಾಡದೆ
ಮೌನವಾಗದೆ
ಕವನಗಳು ಹಾಡಿದವು

ಚಿಮ್ಮಲಾರದೆ
ಚೆಲ್ಲಲಾರದೆ
ಚಿತ್ತಾರ ಮೂಡಿದವು

ಸುಮ್ಮನಾಗದೆ
ಘಮ್ಮೆನ್ನಲಾಗದೆ
ಕುಸುಮಗಳು ಅರಳಿದವು

ತಣಿಸಲಾರದೆ
ಮನ ಮಣಿಸಲಾರದೆ
ಮಳೆಬಿಂದುಗಳು ಉದುರಿದವು

ಸದ್ದು ಇಲ್ಲದೆ
ಸನ್ನೆ ಇಲ್ಲದೆ
ಭಾವಗಳು ಹರಿದಾಡಿದವು

ಅವನೂ ಸುಮ್ಮನೆ
ಅವಳೂ ಸುಮ್ಮನೆ
ಹೆಜ್ಜೆಗಳು ಸಾಗಿದವು

ಶುಕ್ರವಾರ, ಸೆಪ್ಟೆಂಬರ್ 11, 2009

ಆತ್ಮರತಿ-ಆಯ್ದ ಕವನಗಳು

1.ಅಮ್ಮನ ಬುತ್ತಿ ಬೇರಿನಲ್ಲಿ...

ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ
ಮರಕೆಲ್ಲಿ ಗೊತ್ತು?
ಎಲ್ಲಿಂದಲೋ ಬಂದ ರಿವಿಕಿರಣಕ್ಕೆ
ಮುಖ ಮಾಡಿತ್ತು!

ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತು
ಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!
ಬಳುಕುವ ಬಳ್ಳಿಗೆ ಸೋತು ಅಪ್ಪಿ ಬೆಳೆದಿತ್ತು!
ಬಣ್ನ ಬಣ್ನಗಳ ಹಕ್ಕಿಗಳ ಸಂಸಾರ ಮೈ ಎಲ್ಲ ಹೊತ್ತು
ತಾನೋಬ್ಬನೆ ಆಕಾಶಕ್ಕೇಣಿಯಾಗುವನೆಂದು
ಉಬ್ಬಿ ನಿಂತಿತ್ತು!

ಆಗಸವೂ ಸಿಗದೆ ಅಳುಕಿ ತಡಕಾಡಿ
ಬೇರೂ ಸಿಗದೇ ಬುತ್ತಿಯೂ ಸಿಗದೆ ಕಂಗಾಲಾಗಿತ್ತು!
ಮತ್ತೆ ಬೇರನ್ನರಸಿ ಕೆಳಗಿಳಿದಿತ್ತು!
ತಾನು ತಂದಿದ್ದ ಬುತ್ತಿ ಗೆದ್ದಲ ಗೂಡಿನಲ್ಲಿ
ಜೀರ್ಣವಾಗಿತ್ತು

ಬೇರುಗಳ ಸಂಧಿಯಲ್ಲಿ ಎಲ್ಲೋ ಹಣ್ಣಾಗಿದ್ದ ಈಗ
ಮಣ್ಣಾಗಿದ್ದ ಅದರಮ್ಮ ಹೇಳಿದ್ದು
ಆತ್ಮರತಿಗೆ ಮಾತ್ರ ಕೇಳುವಂತಿತ್ತು;
ಮಗುವೇ ನೀನಿನ್ನೂ ಬೆಳೆಯಬೇಕಿತ್ತು..





2.ನೆನಪಲುಳಿ ಕಂಪಾಗಿ

ಅಳುವಿನ ಬಳ್ಳಿಯಲಿ ಅರಳಿದೆ ಮಲ್ಲಿಗೆ
ಹೂ ನಗುತಲಿದೆ ಜುಮ್ಮಗೆ

ಹೂವೊಂದು ಹೊಸತಾರೆ ಕಂಪಿನ ರಸಧಾರೆ
ನಗುತಲಿದೆ ಬಳ್ಳಿ ಮನಸಾರೆ

ಕುಣಿಯಲೇ ಕಂಪು ಬಳುಕಲೇ ಬಳ್ಳಿ
ನಗಲೊಂದು ಹಗಲು ಹೂನಗುವ ದಿನದಲ್ಲಿ

ಗುಡಿಗಲ್ಲ ಮುಡಿಗಲ್ಲ ನಗಲೆಂದೆ ಅರಳಿಹುದು
ನಲಿಸು ಓ ಜೇನೆ ಮೆಲ್ಲಗೆ!




3.ಕತ್ತಲೆಯ ಕತೆ

ಕಣ್ಣು ಕಾಣದವನಿಗೆ ಕತ್ತಲೆ ಕಾಣುತ್ತದೆ
ಕಾರಣ ಕಣ್ಣು ಬೆಳಕನ್ನರಸುತ್ತದೆ

ಬೆಳಕಲ್ಲ ಸೂರ್ಯನೊಬ್ಬನ ಆಸ್ತಿ
ಆದರೂ ಅವರವರ ನೆರಳುಗಳಿಗೆ
ಹೆದರುವವರೇ ಜಾಸ್ತಿ

ಮತ್ತವ ಕತ್ತಲ ಕಂಡಿಲ್ಲ
ಕಾರಣ ಅವನಿಗೆ ನೆರಳೆಂಬುದಿಲ್ಲ

ಕತ್ತಲಿಲ್ಲದಿದ್ದರೆ ಅವನವನೇ ಅಲ್ಲ
ತನ್ನ ಬೆಳಕಲ್ಲಿ ಅವನು ಕಾಣುವುದಿಲ್ಲ

ನಾ ಕಾಣದ ಬೆಳಕು
ನನ್ನದಲ್ಲ
ನಿನ್ನದಲ್ಲ
ಇನ್ಯಾರದೋ ಅಲ್ಲ

ಅದು ಎಲ್ಲಾ ಕತ್ತಲೆಗಳ ಮಗು
ಬಣ್ಣಗಳ ದಾರಿಯಲ್ಲಿ ಬೆಳಕಿನೆಡೆಗೆ
ಸಾಗುವ ಆತ್ಮರತಿಯ ನಗು



4.ಅಷ್ಟೆ!

ಕೆಲವೊಂದು ಮಾತುಗಳಿವೆ ಹೇಳಿ ಬಿಡಲಾರದಂತವು
ಕೆಲವೊಂದು ಕವಿತೆಗಳಿವೆ ಅಕ್ಷರವಾಗಲಾರದಂತವು
ಕೆಲವೊಂದು ರಾಗಗಳಿವೆ ಹಾಡಲಾರದಂತವು
ಕೆಲವೊಂದು ಹೆಜ್ಜೆಗಳಿವೆ ಕುಣಿಯಲಾರದಂತವು
ಕೆಲವೊಂದು ನೆನಪುಗಳಿವೆ ಮರೆಯಲಾರದಂತವು

ಅವು ಸಾಗರದಡಿಯ ಮುತ್ತು ರತ್ನಗಳಂತೆ,
ಹೊರಬಂದರೆ ಆಡಂಬರಿಸಿ ಸಾಯುತ್ತವೆ!
ಹಾರಲಾರದೆ ಈಜುವ ಚಿನ್ನದ ಮೀನುಗಳು!



5.ನಿರಾಳ ತಾರೆ

ನಾನು ಪ್ರಕೃತಿಯ ವಿಕೃತಿ
ನೀನು ವಿಕೃತಿಯ ಪ್ರಕೃತಿ
ನಾನು ನಿನಗಾಗಿ ಹೆಬ್ಬಂಡೆಯೊಡೆದು
ಹೆಮ್ಮರಗಳ ಬಗೆದು
ಗೋಡೆ ಕಂಬಗಳ ಮನೆ ಮಾಡುತ್ತೇನೆ..
ಕಲ್ಲು ಮರಗಳ ಬೆಂಕಿಗೆ
ನೀನು ಜೀವ ಕೊಡುತ್ತೀಯ!
ಅದರಲ್ಲಿ ಸುಟ್ಟು ನನ್ನನ್ನೂ ಸುಡುತ್ತೀಯ!
ನಿನ್ನನ್ನೊಲಿಸಲು ಮೆಟ್ಟಿಲು ಹತ್ತಿದಷ್ಟೂ
ಚಂದ್ರನ ದೂರ ತಳ್ಳುತ್ತೀಯ!
ವಿಭ್ರಾಂತನಾಗಿ ಕೊನೆಗೊಮ್ಮೆ ಆಗಸ ನೋಡಿದರೆ
ತಾರೆಯಲಿ ನಿರಾಳವಾಗಿ ನಕ್ಕು ಬಿಡುವಿಯಲ್ಲ..
ನಿನ್ನ ರೀತಿಗೆ ಆತ್ಮರತಿಯೆನ್ನದೆ ಏನೆನ್ನಬೇಕು ಮತ್ತೆ!

ಗುರುವಾರ, ಸೆಪ್ಟೆಂಬರ್ 3, 2009

ಸಿರಿಕಮಲ

ಕಂದು ಕೊಳದಲ್ಲೊಂದು
ಸಿರಿಕಮಲ ಅರೆಯರಳಿ
ಕೆಂಪಾಗಲೂ ನಾಚಿ ಕೆಂಪಾಗಿದೆ.
ಕೆಂದಳಿರ ಸಂದಿಯಲಿ
ಕಾಣದೇ ಕುಕಿಲೊಂದು
ಮೌನಕ್ಕೇ ಮುತ್ತಿಟ್ಟು ಇಂಪಾಗಿದೆ.
ರಾತ್ರಿಯಲಿ ಹುಣ್ಣಿಮೆಯ
ಕನಸು ಬಂದಂತಾಗಿ
ನಿಟ್ಟುಸಿರ ಕಾವಿನಲಿ ಒಲವರಳಿದೆ .