ಶನಿವಾರ, ಜುಲೈ 6, 2013

ಶ್ರೇಷ್ಟ ಜೀವಿ!

ಹಸಿದಾಗ ಮಾತ್ರ ಬೇಟೆಗೆ ಹೊರಡುವ
ಕಾಡು ಪ್ರಾಣಿಗಳು ಕಡುಕ್ರೂರಿಗಳು

ತುತ್ತು ರೊಟ್ಟಿಗಾಗಿ ಮತ್ತು ಅಲ್ಪ ಮಿಥುನಕ್ಕಾಗಿ
ಕಚ್ಚಾಡುವ ನಾಯಿಗಳದೆಂಥಾ ನಾಯಿಬುದ್ಧಿ?

ಬೀಡಾಡಿ ಗೂಳಿಗಳಿಗೋ
ಕುಟುಂಬ ಯೋಜನೆಯ ಗಂಧಗಾಳಿಯೂ ಇದ್ದಂತಿಲ್ಲ

ಹುಟ್ಟಾ ಗಲೀಜಿನ ಹಂದಿಗಳನ್ನು
ರುಚಿಯಿಂದ ಮಾತ್ರ ಮೆಚ್ಚಬಹುದು

ಅಷ್ಟೊಂದು ಅಕ್ಕರೆಯಿಂದ ಸಾಕಿದ ಕೋಳಿಗಳನ್ನು
ಮೋಸದಿಂದ ಕದ್ದೊಯ್ದು ಬಿರಿಯಾನಿ ಮಾಡದೇ ತಿನ್ನುವ
ನರಿಗಳದು ಠಕ್ಕು ಜೀವನ

ಚುನಾವಣೆಯೇ ಬೇಕಿಲ್ಲದೆ ಪ್ರಚಾರಕ್ಕೆ ಹೊರಡುವ ಕಾಗೆಗಳು
ಬಲು ಕರ್ಕಶ

ಕೈಕಾಲಿದ್ದು ಕಾಡನ್ನು ಕಡಿದು ವನಮಹೋತ್ಸವ
ಮಾಡದ ನಿಷ್ಪ್ರಯೋಜಕ ಜೀವಿಗಳಿಗೆ ಮಂಗಗಳೆಂದು ಕರೆಯಬಹುದು
ಗಂಗೆಯಂತಾ ನದಿಗಳ ನೀರಲ್ಲಿದ್ದೂ ಬದುಕಿ ಉಳಿದ ಮೀನುಗಳಿದ್ದರೆ
ನಮ್ಮ ಹೊಟ್ಟೆಯಲ್ಲಾದರೂ ಸಾಯಲಿ!

ಪ್ರಪಂಚವನ್ನು ಇದ್ದಂತೆ ಇರಬಿಟ್ಟು ತಾನು
ಬಣ್ಣ ಬದಲಿಸುವ ಜೀವೆಯೆ ಗೋಸುಂಬೆ!

ಮನುಷ್ಯನೋ ಇವುಗಳನ್ನೆಲ್ಲ ಮೀರಿದ ಶ್ರೇಷ್ಟ ಜೀವಿ!

ಗುರುವಾರ, ಜೂನ್ 13, 2013

ಇರುವೆ -ಇರವು- ಅರಿವೆ- ಅರಿವು

ನನ್ನ ಇರವಿಗೂ
ಈ ಇರುವೆಯ ಇರವಿಗೂ
ಇರುವ ವ್ಯತ್ಯಾಸವೆಂದರೆ,
 ನನಗೆ ನನ್ನ ಅರಿವಿಲ್ಲ,
ಇರುವೆಗೆ ಅದರ ಪರಿವಿಲ್ಲ

ನನ್ನ ಪ್ರಪಂಚ
ನನ್ನ ಪರಿಧಿಯದ್ದೆ
ಪರಿಧಿ ಅರಿವಿನದ್ದೆ
ಆದರೆ ನನ್ನರಿವಿಗೇ ಪರಿಯಿಲ್ಲ
ಅರಿಯದಿದ್ದುದಕ್ಕೆ ಪಾರವಿಲ್ಲ

ಬರಿದೆ ಇರುವಿನ ಕುರಿತು
ಇರುಳಿಡೀ ಕೊರೆದುಕೊಂಡು
ಮಲಗಿ ಏಳುವ ಮೊದಲೇ
ಇರುವೆಯ ಹುತ್ತ ನನ್ನನ್ನೂ ಮೀರಿ
ಮೇಲೆದ್ದಿದೆ!

ನಾನೂ ಇರುವೆ!
ಇಲ್ಲಿಯೆ!
ನನ್ನ ಪರಿಧಿಯಲ್ಲಿಯೆ!

ಬುಧವಾರ, ನವೆಂಬರ್ 28, 2012

ಎಲ್ಲಿದೆ?



ಕಪ್ಪು ಮಣ್ಣು
ಬಿಳಿಯ ಮೊಳಕೆ
ಹಸಿರು ಜೀವ
ಮಳೆಯ ಹರಕೆ

ನೀಲಿ ಬಾನು
ಬಾನ ಕಣ್ಣು
ಕಣ್ಣ ಬೆಳಕು
 ಬೆಳಕು ಒಂದೆ
 ಬಣ್ಣ ನೂರು

ಬೆಳಕು ಬಣ್ಣ
ಬಣ್ಣ ಹೂವು
ಚಿಟ್ಟೆ ನಾವು
ನಾವು ನೀವು

ಕಾಲ ಕಾಲು
ನಿಲ್ಲದಾಳು
ನಿನ್ನೆ ನಾಳೆ
ಎಲ್ಲಿ ಹೇಳು

ಮಣ್ಣಿನಿಂದ ಬಣ್ಣವಾಗಿ
ಬಣ್ಣದಿಂದ ಬಾನಿಗೇರಿ
ಬಾನಿನಲ್ಲಿ ಬೆಳಕಸೇರಿ
ಬೆಳಕು ಬಣ್ಣ ತೆರೆದಿದೆ
ಎಲ್ಲ ತನ್ನತನವೆ ಮೆರೆದಿದೆ 
ಇಲ್ಲಿ ಎಲ್ಲಿ ನನ್ನ ತನವಿದೆ?

ಬುಧವಾರ, ಸೆಪ್ಟೆಂಬರ್ 26, 2012

ಹಣತೆ

ಹಣತೆ
ಸಣ್ಣ ಅಳತೆ
ಬೆಳಕು ಕತ್ತಲ ಕವಿತೆ

ಕವಿತೆ
ಎದೆಯ ಒರತೆ
ಸಾಗರದ ತೊದಲು ಕಂಡಿತೆ ?

ಕಂಡಿದ್ದು ತಿಳಿವಂತೆ
ಕಾಣದ್ದು ಹೊಳೆವಂತೆ
ಸಾಲು ಸಾಲು ಹಣತೆ

ಹಣತೆ
ಕಣ್ಣ ಕವಿತೆ
ನಕ್ಕಲ್ಲೆಲ್ಲಾ ನೂರು ಒಲವಿನೊರತೆ

ಸೋಮವಾರ, ಆಗಸ್ಟ್ 27, 2012

ಯಥಾರ್ಥ




ಅರ್ಥದ ಅಮಲಿಗೆ
ಬಲಿಯಾಗಿ ಕದಡಿ ಹೋದರೀಗ
ತಿಳಿಯಾಗುವುದು ಹೇಗೆ
ತಿಳಿವಾಗುವುದು ಹೇಗೆ
ಹೊಳೆಯುವುದು ಹೇಗೆ
ಹೊಳೆಯಾಗಿ ಹರಿಯುವುದು ಹೇಗೆ

ಅರ್ಥ ತಾನಿತ್ತೆ?
ಮಾತು ಹುಟ್ಟುವ ಮೊದಲು
ವ್ಯರ್ಥವಾಗಿತ್ತೆ?
ಮೌನಜಪಿಸಿದ ಮಂತ್ರ
ಬೀಜ ಮೊಳೆತಿತ್ತೆ?

ಶಬ್ದ ಶಬ್ದವೂ ಮಾಯೆ
ಮರುಳು ಬೇಕೆ?
ಅಳುವ ಮಗುವಿರೆ
ತಾಯ್ಗೆ ಸೆರಗು ಬೇಕೆ?
ದನಿಯ ಮೀರಿದ ಅರ್ಥ
ಒಲಿಯಬೇಕೆ?

ಗುರುವಾರ, ಜುಲೈ 26, 2012

ವಲ್ಮೀಕ ಸ್ತುತಿ



ಹೊನ್ನ ಜಿಂಕೆ
ಜಿಂಕೆ ಕಣ್ಣು
ಕಣ್ಣ ಕಾಡಿಗೆ
ಕಾಡಿ ಕಾಡಿಗೆ
ಕಾಡ ಜಾಡಿಗೆ
ಹಾ ಲಕ್ಷ್ಮಣಾ...
ಸೀತೆ ಲಂಕೆಗೆ
ಜನರ ಶಂಕೆಗೆ
ಶಂಕೆ ಬೆಂಕಿಗೆ
ಬೆಂಕಿ ಬಾಯಿಗೆ
ಬದುಕು ಕಾಡಿಗೆ
ಕಣ್ಣು ಕಾಡಿಗೆ
ಕಾಡ ಕಣ್ಣಿಗೆ
ಕಣ್ಣನೀರಿಗೆ
ನೀರ ನೀರೆಗೆ
ಬಾಯಾರ್ದ ನೀರೆಯರಸಗೆ
ರಸರಾಮಕತೆಗೆ
ರಸ ಸರಸ ಋಷಿಗೆ
ಋಷಿಯ ಹುಂತಿಗೆ
ಹುಂತಿನ ತಂತಿಗೆ
ತಂತಿನ ಹಸೆಗೆ
ಒರೆದು ಬಂದೆ
ಎರಗಿ ಬಂದೆ
ಹರಸು ತಂದೆ

ಶುಕ್ರವಾರ, ಜೂನ್ 15, 2012