ಗುರುವಾರ, ನವೆಂಬರ್ 24, 2016

ಅರ್ಥಕ್ರಾಂತಿಬಳಲುತ ಕಾಡಲಿ ಅಲೆಯುತಲಿದ್ದೆ
ಹರಿಯುವ ನೀರಲ್ಲಿದ್ದಳು ಲಕುಮಿ

ಹಸಿವಲಿ ಬೇಯುತ ನೋಯುತಲಿದ್ದೆ
ಅನ್ನದ ಅಗುಳಲ್ಲಿದಿದಳು ಲಕುಮಿ

ತಿನ್ನುವ ಲೆಕ್ಕವ ತಪ್ಪುತಲಿದ್ದೆ
ರೋಗದೊಳಿದ್ದಳು ಲಕುಮಿ

ರೋಗದಿ ಬಳಲಿ ಬೆಂಡಾಗಿದ್ದೆ
ಹಸುವಿನ ಹಾಲಲ್ಲಿದ್ದಳು ಲಕುಮಿ

ಹಸುವಿಗೆ ಕೊಟ್ಟಿಗೆ ಕಟ್ಟುತಲಿದ್ದೆ
ಮಣ್ಣಲ್ಲಿದ್ದಳು ಲಕುಮಿ

ಮಣ್ಣನು ಗೆಲ್ಲುತ ಮದವೇರಿದ್ದೆ
ಕಾಮಿನಿಯೊಳಿದ್ದಳು ಲಕುಮಿ

ಕಾಮಿನಿ ಮೋಹದಿ ಮೈಮರೆತಿದ್ದೆ
ಕಾಂಚಣದಲ್ಲಿ ಲಕುಮಿ

ಕಾಂಚಣರಾಶಿಯ ಕಟ್ಟುತಲಿದ್ದೆ
ನೋಟದಲೆಲ್ಲಾ ಲಕುಮಿ

ನಡುರಾತ್ರಿಯಲದು ಕಾಗದವಾಯಿತು
ಹರಿಯುತ್ತಿದ್ದಳು ಲಕುಮಿ

ಹರಿಯುತ ಪೊರೆಯುತ
ಹರಿಯೆದೆಯೊಳಗೆ ಹರಸುತ್ತಿರುವಳು ಲಕುಮಿ