ಮಂಗಳವಾರ, ಸೆಪ್ಟೆಂಬರ್ 15, 2015

ಭಿತ್ತಿಚಿತ್ರಮನೆಯ ಗೋಡೆಯು
ಬೇಡ ಚಿತ್ರವೆ
ನಿನಗೆ ಮನದ
ಗೋಡೆಯ ನೆಲೆಯಿದೆ
ನಿನ್ನ ನಗುವಿಗೆ
ಎದೆಯ ಮಡಿಲಿದೆ
ನನ್ನ ನೋವಿಗೆ ಬಲವಿದೆ
ನಿನ್ನ ಹಾಡಿಗೆ
ಹರಿವ ನದಿಯಿದೆ
ಒಲವು ತುಂಬಿದ ಕಡಲಿದೆ
ನಿನ್ನ ಬೆಳಕಿಗೆ ತೆರೆದ ಬಾನಿದೆ
ಹೂವು ತುಂಬಿದ ಕಾನಿದೆ
ಅಲ್ಲಿ ವಿಹರಿಸು
ಚೈತನ್ಯಹಂಸವೆ
ಅಂತರಾತ್ಮ ಪ್ರದೀಪವೇ 

ಸೋಮವಾರ, ಸೆಪ್ಟೆಂಬರ್ 14, 2015

ನಸುನಗೆಯಸಿಹಿಪಾಕರೋದನೆಯನ  ನೀರಿನಲಿ ಬಿದ್ದು
ಈಜಿ ದಡಸೇರಿ ಬದುಕಿರುವೆ

ಹಸಿವಿನ ಬೆಂಗಾಡಿನಲಿ ಸಿಕ್ಕಿ
ದುಡಿಮೆಯ ನದಿಗಿಳಿದು ಬದುಕಿಬಂದಿರುವೆ

ಬೆನ್ನಟ್ಟಿಬಂದ ಸಿಂಹ ಶಾರ್ದೂಲಗಳಿಗೆ
ಒಡಲ ಬೆಂಕಿಯ ತೋರಿ ಪಾರಾಗಿರುವೆ

ಕೊಲ್ಲಬಂದ ನನ್ನದೇ ನೆರಳುಗಳ
ಕನಸು ಬೆಳಕಿಂದ ದಮನಿಸಿರುವೆ

ಇದೀಗ ನಾ ನಿನ್ನ ನಸುನಗೆಯಪಾಕದಲಿ
ಬಿದ್ದ ಬಡಪಾಯಿ ಇರುವೆ

ನೀನೆತ್ತಿಕೊಳ್ಳದೇ ಮಮತೆಯಲಿ
ತೊಳೆಯದೇ ನಾನೆಲ್ಲಿ ಬದುಕಿ ಬರುವೆ

ಮಂಗಳವಾರ, ಸೆಪ್ಟೆಂಬರ್ 8, 2015

ರಾಸ ಪ್ರಾಸ

ಸಣ್ಣ ಆಸೆ
ಕೇಳು ಕೂಸೆ
ನಿನ್ನ ಹಾಡು ಕೇಳಲು

ಕಳ್ಳ ಶಾಮ
ಸುಳ್ಳರಾಮ
ನನ್ನ ಗಡಿಗೆಯ ನೀಡೆನು

ನಿನ್ನ ನಗುವು
ಬೆಣ್ಣೆಯಂತೆ
ನನ್ನ ಪಾಲು ನೀಡೆಯ

ಮೊಸರು ತಂಡುಲ
ನಿನ್ನ ಹಂಬಲ
ಗಡಿಗೆಯಲ್ಲಿ ಕಾಣೆಯ

ಗಡಿಗೆ ಬಿಟ್ಟು
ಉಡುಗೆ ತೋರೆ
ಎಷ್ಟು ಸುಂದರ ನವಿಲಿದೆ

ಬಿಟ್ಟರೊಡೆವುದು
ಚೆಲ್ಲಿ ಮಿಗುವುದು
ನಿನ್ನ ತಲೆಯ ಮೇಲೆ ಗರಿಯಿದೆ

ಕಾಡುಮೇಡನು
ಅಲೆದು ತಂದ
ಸಿಹಿಯ ಹಣ್ಣಿದೆ ನನ್ನಲಿ

ಹಣ್ಣಿಗಿಂತ
ಬಣ್ಣ ತುಂಬಿದ
ಮಾತು ಸಿಹಿಯಿದೆ ನಿನ್ನಲಿ

ನಾಚುವಂತೆ
ಮಾಡಬೇಡ
ಹೊಟ್ಟೆ ಹಸಿದ ಸಮಯದಿ

ದೋಚಿತಿನ್ನುವ
ಆಸೆ ಬಿಟ್ಟು
ಹಂಚಿ ತಿನ್ನುವ ಚಂದದಿ

ಕೊಳಲನೂದಲೆ
ನಿನ್ನ ಹಾಡಿಗೆ
ಜೇನು ಪಾಯಸ ಸವಿಯುತ

ನನ್ನದೇನಿದೆ
ನಿನ್ನ ಪಾಲಿದು
ಮುರಳಿ ನಾದವೇ ಜೀವಿತ

ಶುಕ್ರವಾರ, ಸೆಪ್ಟೆಂಬರ್ 4, 2015

ದೇವರೆ,ನೀನು ಬಹುಕಾಲ
ಮಳೆಗಾಳಿ ಬಿಸಿಲು
ಗುಡುಗು ಸೀತೋಷ್ಣಪಿತ್ಥಾದಿಗಳಿಂದ
ನರಳದಿರಲೆಂದು ನಿನ್ನ
ಕಲ್ಲಿನಲಿ ಕಡೆದಿಟ್ಟೆ

ಮಾನವ ಕೋಟಿಯ
ಪ್ರಾರ್ಥನೆಗಳೆಲ್ಲಾ ತುಂಬಲು
ಗೆರಸಿಯ ಕಿವಿಕೊಟ್ಟೆ

ನಮ್ಮಯ ಪಾಪ ಪುಣ್ಯಗಳ
ತೇಗಲು ಘನೋದರವ ಕೊಟ್ಟೆ

ಬರಿಯ ಗೋಳುಗಳ
ಕತೆಬೇಡೆಂದು ಬಗೆಬಗೆ
ಸ್ತುತಿಗಳ ಹಾಡುತ ಕುಳಿತುಬಿಟ್ಟೆ

ಕತ್ತಲಾಗಲು ನಿನ್ನ ನೋಡಲು
ದೀಪವ ಹಚ್ಚಿಟ್ಟೆ

ಸ್ತುತಿಗಳ ಮತ್ತಲಿ
ಮೈಮರೆಯದಂತೆ
ಶಂಖ ಜಾಗಟೆಗಳ
ದಿನ ಬಡಿದಿಟ್ಟೆ

ನಿನ್ನ ಪ್ರೀತಿಸುವ
ಪರಿಯನು ತಿಳಿಯದೆ
ಪಂಚೋಪಚಾರ ಪೂಜೆಗಳ
ಮಡುತ ಕುಳಿತುಬಿಟ್ಟೆ

ನೀನೋ
ನಿರಾಕಾರ
ನಿರ್ಗುಣ
ನಿರ್ವಿಕಲ್ಪ
ನಿರ್ವಿಕಾರ
ನಿರುದ್ದೇಶಕ
ನಿರುದ್ಯೋಗಿ
ನಿರ್ದೇಶಕನೆಂಬುದ
ತೋರುತ ಕುಳಿತುಬಿಟ್ಟೆ

ಬುಧವಾರ, ಸೆಪ್ಟೆಂಬರ್ 2, 2015

ಸಾಕುಒಂದು
ಕಿರಣ
ಸಾಕು
ಎದೆ ಹೂವ
ಜೀವಕೆ

ಒಂದು
ಕನಸು
ಬೇಕು
ಕಣ್ಣೀರ
ದಮನಕೆ

ನೀ
ನಗುವ
ಬೆಳಕು
ಸಾಕು
ಜಗದೆಲ್ಲ ಬಣ್ಣಕೆ


ಮಂಗಳವಾರ, ಸೆಪ್ಟೆಂಬರ್ 1, 2015

ಮನದ ಒಗಟುಏನು
ಹಾಡುತಿರುವೆ
ಮನವೇ ನನಗೆ
ಚೂರೂ
ತಿಳಿಯುತಿಲ್ಲ

ತಂತಿಯಲ್ಲಿ
ಮಿಡಿದ ರಾಗ
ಬುರುಡೆ ಸೇರುತಿಲ್ಲ

ನಗುವ ಹೂವ
ದಾಟಿ ಮುಂದೆ
ಜಗವು ಕಾಣುತಿಲ್ಲ

ನನ್ನ ದೃಷ್ಟಿತಾಕಿ
ಸೊರಗದಂತೆ
ಕಾಯತಿಳಿಯುತಿಲ್ಲ

ಬಾಡದಂತೆ
ನೋಯದಂತೆ
 ಹೂವ ನಗೆಯ
ತುಂಬಿ ಒಯ್ಯಬೇಕು

ಅರವಿಂದಮುಖನ
ಪಾದಪದುಮದಲ್ಲಿ
ಕರಗಬೇಕು

🌷🌷🌷🌷🌷🌷🌷🌷🌷