ಗುರುವಾರ, ಸೆಪ್ಟೆಂಬರ್ 4, 2014

ನೆರೆ

ಖಾಲಿಯಿದ್ದ ಮನಸ್ಸಿನೊಳಗೆ
ಕರಿಯ ಮೋಡ ಕೂಡಿದೆ
ಮಳೆಯ ಕರೆದು ತೋಯುವಂತ
ತುಡಿತ ಮಿಡಿದು ಹಾಡಿದೆ

ಕಾಣದಂತೆ ಕತ್ತಲನ್ನು
ತಬ್ಬಿಕೊಂಡು ಕರಗಲೇ
ಮಿಂಚು ಬೆಳಕಿನಲ್ಲಿ
ನಿನ್ನ ನಗುವ ಹುಡುಕಿ ಕೊರಗಲೆ

ಸಿಡಿಲ ರಥವ ಏರಿ ನಿನ್ನ
ಎದೆಯಗೂಡ ಸೇರಲೇ
ಹರಿವ ನೆರೆಯ ತುಂಬ ಬರಿದೆ
ದೋಣಿ ಬಿಡುತ ಹಾಡಲೆ

ಶುಕ್ರವಾರ, ಮೇ 2, 2014

ಒಡೆಯದಿರು

ಹೊಂಗೆ ನೆರಳಡಿ
ನಿನ್ನ ಹೆರಳಡಿ
ಬೇಸಗೆಯ ಕಳೆವೆ

ಗುಡುಗು ಸಿಡಿಲ ಮರೆತು
ನಿನ್ನ ಮಿಂಚಿಗೆ
ಮಳೆಯಾಗುವೆಚಳಿಗಾಳಿಗೆ
 ಕಾವುಕೊಟ್ಟು
ನಿನ್ನ ಮರಿಮಾಡುವೆ

ಕಾಲದ ಕಾಲಿಗೆ
ಹಗ್ಗವ ಕಟ್ಟಿ
ಟೊಂಕಾಲಾಡಿಸುವೆ

ಬಂದು ನೋಡು
ನಿಂತು ನೋಡು
ನಾ ನಿನ್ನ ಕಾಣುವ
ಕನ್ನಡಿಯಾಗುವೆ

ಮಂಗಳವಾರ, ಜನವರಿ 7, 2014

ಕತ್ತಲೆ


ಹರಡಿತು ಕನಸು ಚಪ್ಪರವಾಗಿ
ನಾ ಮಲ್ಲಿಗೆ ಮಾಲಿ ..ಹಾಂ.. ಇದು ಮಾಗಿ
ಹಾಲುಹಾದಿ ನಿನ್ನ ಹೆರಳು
ಇಲ್ಲೆಲ್ಲಿದೆ ನೆರಳು
ಗಾಳಿಯ ಮಿಡಿದಿದೆ ಬೆರಳು..

ಸುರಗಿಯ ಬೆರಗು ದಿನಬೆಳಗೂ
ನಾಗನ ನಡೆ ನಿನ್ನಯ ಜಡೆ
ಸರಿದಿದೆ ಯಾವೆಡೆ...
ಕಾಡೆ ಗೂಡೆ
ಬಿರಿದು ಜರಿಯುತಿದೆ ಕಾವಿನ ಗೋಡೆ...

ಗಂಧದ ಕನಸಲಿ ಚಳಿಬಿಟ್ಟಿಲ್ಲ
ಬಿಸಿಲು ಎಬ್ಬಿಸಿದೆ ಸ್ನಾನವೆ ಇಲ್ಲ
ದಿನ ಓಡುತಲಿದೆ
ಬೆಳಕೆಲ್ಲಿದೆ
ಮುಗುಳರಳು ಕಾಣದೆ ಇನ್ನೂ ಕತ್ತಲೆ