ಗುರುವಾರ, ನವೆಂಬರ್ 24, 2016

ಅರ್ಥಕ್ರಾಂತಿಬಳಲುತ ಕಾಡಲಿ ಅಲೆಯುತಲಿದ್ದೆ
ಹರಿಯುವ ನೀರಲ್ಲಿದ್ದಳು ಲಕುಮಿ

ಹಸಿವಲಿ ಬೇಯುತ ನೋಯುತಲಿದ್ದೆ
ಅನ್ನದ ಅಗುಳಲ್ಲಿದಿದಳು ಲಕುಮಿ

ತಿನ್ನುವ ಲೆಕ್ಕವ ತಪ್ಪುತಲಿದ್ದೆ
ರೋಗದೊಳಿದ್ದಳು ಲಕುಮಿ

ರೋಗದಿ ಬಳಲಿ ಬೆಂಡಾಗಿದ್ದೆ
ಹಸುವಿನ ಹಾಲಲ್ಲಿದ್ದಳು ಲಕುಮಿ

ಹಸುವಿಗೆ ಕೊಟ್ಟಿಗೆ ಕಟ್ಟುತಲಿದ್ದೆ
ಮಣ್ಣಲ್ಲಿದ್ದಳು ಲಕುಮಿ

ಮಣ್ಣನು ಗೆಲ್ಲುತ ಮದವೇರಿದ್ದೆ
ಕಾಮಿನಿಯೊಳಿದ್ದಳು ಲಕುಮಿ

ಕಾಮಿನಿ ಮೋಹದಿ ಮೈಮರೆತಿದ್ದೆ
ಕಾಂಚಣದಲ್ಲಿ ಲಕುಮಿ

ಕಾಂಚಣರಾಶಿಯ ಕಟ್ಟುತಲಿದ್ದೆ
ನೋಟದಲೆಲ್ಲಾ ಲಕುಮಿ

ನಡುರಾತ್ರಿಯಲದು ಕಾಗದವಾಯಿತು
ಹರಿಯುತ್ತಿದ್ದಳು ಲಕುಮಿ

ಹರಿಯುತ ಪೊರೆಯುತ
ಹರಿಯೆದೆಯೊಳಗೆ ಹರಸುತ್ತಿರುವಳು ಲಕುಮಿ

ಬುಧವಾರ, ಜುಲೈ 27, 2016

ಆಸ್ವಾದಿ

ಈ ಬಾನು
ಭೂಮಿ
ಗಿಡ ಮರ
ಒದ್ದೆ ನೆಲ
ಅದರ ಮೇಲಿನ
ಮುದ್ದು ಹೆಜ್ಜೆಗಳು
ರಂಗೇರಿ
ರಂಗೋಲಿ ಬಿಡಿಸುವ
ಬೆಳಕಿನ ಬಣ್ಣದ ರವಿರಾಯ
ನೀನೆಂಬ ನಾನು
ನಾನೆಂಬ ನೀನು
ಕೈಗೆ ಕೈ
ಕಣ್ಣಿಗೆ ಕಣ್ಣು ಕೊಟ್ಟು
ಬಣ್ಣದ ಬೆಳಕು ಕಾಣುತ
ಕನಸಿನ ಕವಿತೆ
ಹೊಸೆಯುತ್ತಿದ್ದರೆ
ಕತ್ತಲಲ್ಲಿ ಕರಗಿ
ಬೆಳಕಿನ ಮೌನ ಆಸ್ವಾದಿಸಬಹುದಿತ್ತು 

ಗುರುವಾರ, ಜುಲೈ 14, 2016

ಜೀವನಯಜ್ಞ


ಉತ್ಕ್ರಮಣಗೈಯುತಿದೆ ಅಗ್ನಿದಂಡ
ಬುಡಕಿಷ್ಟು ಉರಿಯ ನೀಡು
ನೋವಿಂದ ನೆಗೆದದಕೆ ಊರ್ಧ್ವಗತಿಯು 
ಉದರದಲಿ ಕನಸಗೂಡು
ಕಟ್ಟಿಕೊಂಡಿದೆ ನಾಳೆಗಳ ಬಗಲಿನಲ್ಲಿ
ನಿನ್ನೆಗಳ ತುಳಿವ ಜಾಡು
ಇಂದು ಎಂಬುದು ಉರಿವ ಒಡಲ ಬೆಂಕಿ
ಗುರಿಯೊಂದೆ ಬೆಳಕನಾಡು
ಸುಡುವ ಬದುಕಲ್ಲಿ ನಿತ್ಯಯಜ್ಞ
ಉಸಿರುಗಳ ಸ್ವಾಹ ಮಂತ್ರ
ತನ್ನ ತಾ ಕಳೆದು ಬೆಳಗಿಕೊಳುವ
ವ್ಯಾಪಾರ ಶಿವನ ತಂತ್ರ

ಭಾನುವಾರ, ಏಪ್ರಿಲ್ 10, 2016

ನನ್ನದೇ!?ಮಣ್ಣಿದು ನನ್ನದಲ್ಲ
ದುಡಿಮೆಯ ಹಸಿವು ನನ್ನದೇ

ನೀರದು ನನ್ನದಲ್ಲ
ದಾಹದ ದಣಿವು ನನ್ನದೇ

ಗಾಳಿಯು ನನ್ನದಲ್ಲ
ಉಸಿರಿನ ತವಕ ನನ್ನದೇ

ಬೆಳಕದು ನನ್ನದಲ್ಲ
ಬೆಳಗುವ ಕಣ್ಣು ನನ್ನದೇ

ಗಗನವು ನನ್ನದಲ್ಲ
ಹರಡಿದ ಕನಸು ನನ್ನದೇ

ತನುವಿದು ನನ್ನದಲ್ಲ
ತರಚು ಗಾಯ ನನ್ನದೇ

ಮನವಿದು ನನ್ನದಲ್ಲ
ಮಾಯದ ನೋವು ನನ್ನದೇ

ಹೂವದು ನನ್ನದಲ್ಲ
ನಗುವಿನ ನಲಿವು ನನ್ನದೇ

ರಂಗವು ನನ್ನದಲ್ಲ
ನಾಥನ ಪಾದ ನನ್ನದೇ

ಸೋಮವಾರ, ಫೆಬ್ರವರಿ 29, 2016

ನಗೆಹೂ ಹಾಡುನಿನ್ನ ದನಿಯಲದ್ದಿತೆಗೆದ
ಹಾಡಲೆಂತ ಸೊಗವಿದೆ

ಬಿರಿವ ಕನಸ
ಕಂಡ ಸುಮಕೆ
ಭ್ರಮರ ತಂದ ಜಗವಿದೆ

ತಂಬೆಳನು
ತುಂಬಿತಂದ
ಚಂದಮನಲೂ ಕೊರಗಿದೆ

ಹಾಡನೆಣಸಿ
ದೂರನಿಂತು
ಮರುಗುವಂತ ಸೊಗಸಿದೆ

ಬಾಯಾರಿದ
ಮನಕುಲುಮೆಯ
ತಣಿಸಲೊಂದು ಹಾಡಿದೆ

ನಗೆಹೂವದು
ಬೀರಿದ ಘಮ
ಬಾಡದಂತೆ ತುಂಬಿದೆಶನಿವಾರ, ಜನವರಿ 9, 2016

ಸಮಾಧಿಎಟುಕದ ಬಾನು
ಎರಡಡಿ ಮೇಲೆ
ಕೈಚಾಚಲಡ್ಡಿಯಿಲ್ಲ

ನಕ್ಷತ್ರ ನಿಲುಕದಿದ್ದರೂ
ಹೆರಳ ಹರಡು ಎದೆಯಮೇಲೆ
ಮಲ್ಲಿಗೆಯು ನಗುವುದಲ್ಲ

ಕಾಣದಿರೆ ಜಗವು ಕಣ್ಮುಚ್ಚು ಹಾಗೇ
ಕನಸ ಕಾಣಲು ಸಾಲಿನಲಿ
ತುಸು ಕ್ಷಣವೂ ನಿಲ್ಲಬೇಕಿಲ್ಲ

ಎಲ್ಲೋ ಹುಡುಕಿದ ನೆಮ್ಮದಿ
ನವಿಲು ಒಳಗೇ ಗರಿ ಬಿಚ್ಚಿ
ಕುಣಿಯುತಿದೆಯಲ್ಲ