ಗುರುವಾರ, ಸೆಪ್ಟೆಂಬರ್ 13, 2018

ಗಣಾರಾಧನೋತ್ಸವ

{ }


ಶೂನ್ಯಗಣವೆಂಬುದುಂಟು
ಏನೆಂದರೇನೂ ಇಲ್ಲ
ಗಜಕರ್ಣಾವರಣದ ಹೊರತು
ಎಲ್ಲಾ ಗಣಗಳಲ್ಲೂ  ಶೂನ್ಯಗಣವಿದೆ


{ x, y, z}
ನಮಗೆ ಬೇಕಾದಂತೆ ಗಣವಿಂಗಡಣೆ
ಮಾಡಬಹುದು
ಬಿಳಿಯರ ಕರಿಯರ
ಹಿರಿಯರ ಕಿರಿಯರ
ಹೀಗೆ ಬೇಕಾದಂತೆ

U

ನಾವೂ ನೀವೂ ಗಣಾಂಶಗಳೇ
ವಿಶ್ವಗಣದ ಗುಣಾಂಶಗಳೇ
ಮತ್ತದೇ ನಮಗೆ ಬೇಕಾದ
ನಮ್ಮದೇ ಗಣವನ್ನು ಮಾಡಿಕೊಳ್ಳಬಹುದು
ರಾಮನನ್ನೋ ರಹೀಮನನ್ನೋ ಆರಾಧಿಸಬಹುದು

{f(x)} x{f(y)}


ಹೀಗೇ ಗಣಯುಕ್ತಿ ಗಳಿಸಿ
ಶೂನ್ಯಗಣದೊಳು ಮೋದಕ
ತುಂಬಿಸಿ
ಸಲಗಸಮೂಹದಂತೆ ನಡೆಯೋಣ
ಬನ್ನಿ ವಿಶ್ವಗಣಾರಾಧನೆ ಮಾಡೋಣ


ಗಣಗಳೆಲ್ಲಾ ಒಡಲಾಗಲಿ
ತುಳಿಸಿಕೊಂಡೇರಿ ಬೆಳೆವ
ಗರಿಕೆಯ ಗ್ರಹಿಕೆ ಮುಡಿಯೇರಲಿ
ಸದಾಗ್ರಹದ ಮೋದಕದ ಮೋಹದ ಹಸಿವಿರಲೆಮಗೆ
ನಮ್ಮಾನೆಗೆ ನಮ್ಮಂಕುಶವಿರಲಿ
ವ್ಯಾಪ್ತರಾಗುವ ಹೃದಯಗಳಲಿ

ಮತ್ತೆ ಮನದ ಬೆಳಕಾಗಿ
ಮತ್ತೆ ಮನೆಯ ಬೆಳಕಾಗಿ
ಮತ್ತೆ ಜನರ ಬೆಳಕಾಗಿ
ಮತ್ತೆ ಜಗದ ಬೆಳಕಾಗಿ
ಬೆಳೆಯೋಣ
ಬರಿಯ ಗಣಾಂಶರಾಗದೇ
ಗಣಾಧಿಪರಾಗೋಣ
🕉️✡️🕉️✡️🕉️✡️🕉️✡️🕉️

ಭಾನುವಾರ, ಸೆಪ್ಟೆಂಬರ್ 2, 2018

ಆಹಾ...



ಇಲ್ಲ..
ಇವಳನ್ನು ಯಾವ ಹೂವಿಗೋ
ಹಣ್ಣಿಗೋ, ಅಪ್ಸರೆಗೋ
ಹೋಲಿಸಲಾರೆ
ಅವಳೊಂದು
ಹೊಸ ಉಪಮೆ

ಮಾದಕ ಮೋಹಕವೆಂದು
ಮೈ ಮರೆಯಲಾರೆ
ಹೃದಯದ ದನಿಯೆಂದು
ಕವಿತೆ ಬರೆಯಲಾರೆ
ಉರಿವ ಮೈಯಲ್ಲ
ಸಿಗದ ಮನಸಲ್ಲ
ಎಂದೂ ಚ್ಯುತಿ ಇರದ
ಅಂತರಾತ್ಮವೇ ಅವಳು

ಪ್ರೀತಿ ಎಂಬುದು
ಅವರಿವರ ಮಾತಿನ ಹಳಸು ನಕಲು ನನ್ನ ಕವಿತೆಯಲ್ಲ

ನನ್ನದೋ ನಿನ್ನ
ತನುಮನದ ಹಂಗಿಲ್ಲದ
ಆತ್ಮಾನುಭಾವ