ಗುರುವಾರ, ಮಾರ್ಚ್ 1, 2018

ಚಂದಮಾಮಕನಸುಗಳ ಬಿತ್ತುತ್ತ
ನಭವೆಲ್ಲ ಬೆಳೆಯುತ್ತ
ಬಂದಿಹನು ಚಂದಮಾಮ

ಯಾರು ಕೇಳದ ಕಾಡು
ಎಂದೂ ಮರೆಯದ ಹಾಡು
ತಂದಿರುವ ಚಂದಮಾಮ

ಅಪ್ಪ ಮೊದಲಿಗೆ ಕೊಟ್ಟ
ಹೊಳೆವ ನಾಣ್ಯದ ನೆನಪು
ತಂದಿರುವ ಚಂದಮಾಮ

ಕರೆದ ನೊರೆಹಾಲನ್ನು
ಅಮ್ಮ ಕುಡಿಸಿದ ಹಾಗೆ
ನಗುತಿರುವ ಚಂದಮಾಮ

ಮೈಮರೆತ ನಿದ್ದೆಯಲೂ
ಕನಸುಗಳ ಜಾಗರದಲೂ
ಸಹಪಯಣಿಗ ಚಂದಮಾಮ

ಊರು ಸೂರುಗಳಾಚೆ
ಮಾತು ಮೌನಗಳಾಚೆ
ಕಬ್ಬಿಗನು ಚಂದಮಾಮ

ಶುಕ್ರವಾರ, ಮೇ 5, 2017

ದಶಾವತಾರಬಡ ಭಿಕ್ಷುಕನೊಬ್ಬ
ಒಣ ರೊಟ್ಟಿಯಲಿ
ಕಂಡಮೃತವ

ದಾರಿಹೋಕನು
ಮರದನೆಳಲಲಿ
ಕಂಡಮರಾವತಿಯ

ಹಸುಕಂದನು
ತಾಯ ಮಡಿಲಲಿ
ಕಂಡ ವೈಭವವ

ಬಡತನದ ಬೇಗೆಯಲಿ
ದುಡಿಮೆಫಲದ
ಸವಿಯ

ಒಂಟಿ ಕಾಲನ
ಶೂಲದಿ ಅವಳ
ಮುಗುಳುನಗೆ ಬೆಳಕ

ಅರಿಯಲಾದರೂ
ಅನುಭವಿಸಲಾದರೂ
ಅವತರಿಸಲೇಬೇಕಾಯ್ತು
ಅವನಿಯಲವಗೆ

ಶನಿವಾರ, ಏಪ್ರಿಲ್ 15, 2017

ಮ್ಮ್ ವ್ವಾನಾನು ಬರೆಯುವುದಲ್ಲ ಕವಿತೆ
ಎಲ್ಲೋ ಇರುತ್ತದೆ ಅದರ
ಪಾಡಿಗೆ ಸುಮ್ಮನೇ
ನಾನು ಹುಟ್ಟುವ
ಮೊದಲೇ
ಇದ್ದಂತೆ
ನನ್ನಮ್ಮ
ಹೆತ್ತಂತೆ
ನನ್ನನ್ನು ಹಡೆದುಬಿಡುತ್ತದೆ
ನಾನು ಅತ್ತಾಗ
ನೀವು ಸಕ್ಕರೆ ತಿನ್ನುವಿರಿ
ಅಷ್ಟೇ

ಭಾನುವಾರ, ಏಪ್ರಿಲ್ 9, 2017

ಬೇಗೆನನ್ನ ಕವಿತೆಗಳು
ಬೇಗೆಯಲಿ ಒಣಗುತ್ತಿವೆ
ಅದೂ ಒಂದು ಪ್ರಕ್ರಿಯೆ
ಈ ವಿರಹದಂತೆ

ಬಿಸಿಲು ಕುಡಿದು
ಗಟ್ಟಿಯಾಗಿ ಚಿಗುರಲಿವೆ
ಮಳೆಗೆ ನೀ ಬಿತ್ತಿದಂತೆ

ಬೇಗೆಯ ಕನಸಿನಿಂದಲ್ಲವೇ
ಮೋಡ ಕಟ್ಟುವುದು
ಮಳೆ ಕರಗುವುದು
ಹಸಿರು ಮೊಳೆಯುವುದು

ನನಗೂ ಕನಸು ಕಾಡುತಿವೆ
ಹಗಲೂರಾತ್ರಿ ಪದವರಸಿ
ಹೊರಟ ಸಾಲಿನ ಸೆರಗಿನಂತೆ
ನಿನ್ನ ಹಾಡಿನಂತೆ

ಗುರುವಾರ, ನವೆಂಬರ್ 24, 2016

ಅರ್ಥಕ್ರಾಂತಿಬಳಲುತ ಕಾಡಲಿ ಅಲೆಯುತಲಿದ್ದೆ
ಹರಿಯುವ ನೀರಲ್ಲಿದ್ದಳು ಲಕುಮಿ

ಹಸಿವಲಿ ಬೇಯುತ ನೋಯುತಲಿದ್ದೆ
ಅನ್ನದ ಅಗುಳಲ್ಲಿದಿದಳು ಲಕುಮಿ

ತಿನ್ನುವ ಲೆಕ್ಕವ ತಪ್ಪುತಲಿದ್ದೆ
ರೋಗದೊಳಿದ್ದಳು ಲಕುಮಿ

ರೋಗದಿ ಬಳಲಿ ಬೆಂಡಾಗಿದ್ದೆ
ಹಸುವಿನ ಹಾಲಲ್ಲಿದ್ದಳು ಲಕುಮಿ

ಹಸುವಿಗೆ ಕೊಟ್ಟಿಗೆ ಕಟ್ಟುತಲಿದ್ದೆ
ಮಣ್ಣಲ್ಲಿದ್ದಳು ಲಕುಮಿ

ಮಣ್ಣನು ಗೆಲ್ಲುತ ಮದವೇರಿದ್ದೆ
ಕಾಮಿನಿಯೊಳಿದ್ದಳು ಲಕುಮಿ

ಕಾಮಿನಿ ಮೋಹದಿ ಮೈಮರೆತಿದ್ದೆ
ಕಾಂಚಣದಲ್ಲಿ ಲಕುಮಿ

ಕಾಂಚಣರಾಶಿಯ ಕಟ್ಟುತಲಿದ್ದೆ
ನೋಟದಲೆಲ್ಲಾ ಲಕುಮಿ

ನಡುರಾತ್ರಿಯಲದು ಕಾಗದವಾಯಿತು
ಹರಿಯುತ್ತಿದ್ದಳು ಲಕುಮಿ

ಹರಿಯುತ ಪೊರೆಯುತ
ಹರಿಯೆದೆಯೊಳಗೆ ಹರಸುತ್ತಿರುವಳು ಲಕುಮಿ

ಬುಧವಾರ, ಜುಲೈ 27, 2016

ಆಸ್ವಾದಿ

ಈ ಬಾನು
ಭೂಮಿ
ಗಿಡ ಮರ
ಒದ್ದೆ ನೆಲ
ಅದರ ಮೇಲಿನ
ಮುದ್ದು ಹೆಜ್ಜೆಗಳು
ರಂಗೇರಿ
ರಂಗೋಲಿ ಬಿಡಿಸುವ
ಬೆಳಕಿನ ಬಣ್ಣದ ರವಿರಾಯ
ನೀನೆಂಬ ನಾನು
ನಾನೆಂಬ ನೀನು
ಕೈಗೆ ಕೈ
ಕಣ್ಣಿಗೆ ಕಣ್ಣು ಕೊಟ್ಟು
ಬಣ್ಣದ ಬೆಳಕು ಕಾಣುತ
ಕನಸಿನ ಕವಿತೆ
ಹೊಸೆಯುತ್ತಿದ್ದರೆ
ಕತ್ತಲಲ್ಲಿ ಕರಗಿ
ಬೆಳಕಿನ ಮೌನ ಆಸ್ವಾದಿಸಬಹುದಿತ್ತು 

ಗುರುವಾರ, ಜುಲೈ 14, 2016

ಜೀವನಯಜ್ಞ


ಉತ್ಕ್ರಮಣಗೈಯುತಿದೆ ಅಗ್ನಿದಂಡ
ಬುಡಕಿಷ್ಟು ಉರಿಯ ನೀಡು
ನೋವಿಂದ ನೆಗೆದದಕೆ ಊರ್ಧ್ವಗತಿಯು 
ಉದರದಲಿ ಕನಸಗೂಡು
ಕಟ್ಟಿಕೊಂಡಿದೆ ನಾಳೆಗಳ ಬಗಲಿನಲ್ಲಿ
ನಿನ್ನೆಗಳ ತುಳಿವ ಜಾಡು
ಇಂದು ಎಂಬುದು ಉರಿವ ಒಡಲ ಬೆಂಕಿ
ಗುರಿಯೊಂದೆ ಬೆಳಕನಾಡು
ಸುಡುವ ಬದುಕಲ್ಲಿ ನಿತ್ಯಯಜ್ಞ
ಉಸಿರುಗಳ ಸ್ವಾಹ ಮಂತ್ರ
ತನ್ನ ತಾ ಕಳೆದು ಬೆಳಗಿಕೊಳುವ
ವ್ಯಾಪಾರ ಶಿವನ ತಂತ್ರ