ಶುಕ್ರವಾರ, ಮೇ 5, 2017

ದಶಾವತಾರ



ಬಡ ಭಿಕ್ಷುಕನೊಬ್ಬ
ಒಣ ರೊಟ್ಟಿಯಲಿ
ಕಂಡಮೃತವ

ದಾರಿಹೋಕನು
ಮರದನೆಳಲಲಿ
ಕಂಡಮರಾವತಿಯ

ಹಸುಕಂದನು
ತಾಯ ಮಡಿಲಲಿ
ಕಂಡ ವೈಭವವ

ಬಡತನದ ಬೇಗೆಯಲಿ
ದುಡಿಮೆಫಲದ
ಸವಿಯ

ಒಂಟಿ ಕಾಲನ
ಶೂಲದಿ ಅವಳ
ಮುಗುಳುನಗೆ ಬೆಳಕ

ಅರಿಯಲಾದರೂ
ಅನುಭವಿಸಲಾದರೂ
ಅವತರಿಸಲೇಬೇಕಾಯ್ತು
ಅವನಿಯಲವಗೆ

ಶನಿವಾರ, ಏಪ್ರಿಲ್ 15, 2017

ಮ್ಮ್ ವ್ವಾ



ನಾನು ಬರೆಯುವುದಲ್ಲ ಕವಿತೆ
ಎಲ್ಲೋ ಇರುತ್ತದೆ ಅದರ
ಪಾಡಿಗೆ ಸುಮ್ಮನೇ
ನಾನು ಹುಟ್ಟುವ
ಮೊದಲೇ
ಇದ್ದಂತೆ
ನನ್ನಮ್ಮ
ಹೆತ್ತಂತೆ
ನನ್ನನ್ನು ಹಡೆದುಬಿಡುತ್ತದೆ
ನಾನು ಅತ್ತಾಗ
ನೀವು ಸಕ್ಕರೆ ತಿನ್ನುವಿರಿ
ಅಷ್ಟೇ

ಭಾನುವಾರ, ಏಪ್ರಿಲ್ 9, 2017

ಬೇಗೆ



ನನ್ನ ಕವಿತೆಗಳು
ಬೇಗೆಯಲಿ ಒಣಗುತ್ತಿವೆ
ಅದೂ ಒಂದು ಪ್ರಕ್ರಿಯೆ
ಈ ವಿರಹದಂತೆ

ಬಿಸಿಲು ಕುಡಿದು
ಗಟ್ಟಿಯಾಗಿ ಚಿಗುರಲಿವೆ
ಮಳೆಗೆ ನೀ ಬಿತ್ತಿದಂತೆ

ಬೇಗೆಯ ಕನಸಿನಿಂದಲ್ಲವೇ
ಮೋಡ ಕಟ್ಟುವುದು
ಮಳೆ ಕರಗುವುದು
ಹಸಿರು ಮೊಳೆಯುವುದು

ನನಗೂ ಕನಸು ಕಾಡುತಿವೆ
ಹಗಲೂರಾತ್ರಿ ಪದವರಸಿ
ಹೊರಟ ಸಾಲಿನ ಸೆರಗಿನಂತೆ
ನಿನ್ನ ಹಾಡಿನಂತೆ