ಬುಧವಾರ, ಜುಲೈ 27, 2016

ಆಸ್ವಾದಿ

ಈ ಬಾನು
ಭೂಮಿ
ಗಿಡ ಮರ
ಒದ್ದೆ ನೆಲ
ಅದರ ಮೇಲಿನ
ಮುದ್ದು ಹೆಜ್ಜೆಗಳು
ರಂಗೇರಿ
ರಂಗೋಲಿ ಬಿಡಿಸುವ
ಬೆಳಕಿನ ಬಣ್ಣದ ರವಿರಾಯ
ನೀನೆಂಬ ನಾನು
ನಾನೆಂಬ ನೀನು
ಕೈಗೆ ಕೈ
ಕಣ್ಣಿಗೆ ಕಣ್ಣು ಕೊಟ್ಟು
ಬಣ್ಣದ ಬೆಳಕು ಕಾಣುತ
ಕನಸಿನ ಕವಿತೆ
ಹೊಸೆಯುತ್ತಿದ್ದರೆ
ಕತ್ತಲಲ್ಲಿ ಕರಗಿ
ಬೆಳಕಿನ ಮೌನ ಆಸ್ವಾದಿಸಬಹುದಿತ್ತು 

ಗುರುವಾರ, ಜುಲೈ 14, 2016

ಜೀವನಯಜ್ಞ


ಉತ್ಕ್ರಮಣಗೈಯುತಿದೆ ಅಗ್ನಿದಂಡ
ಬುಡಕಿಷ್ಟು ಉರಿಯ ನೀಡು
ನೋವಿಂದ ನೆಗೆದದಕೆ ಊರ್ಧ್ವಗತಿಯು 
ಉದರದಲಿ ಕನಸಗೂಡು
ಕಟ್ಟಿಕೊಂಡಿದೆ ನಾಳೆಗಳ ಬಗಲಿನಲ್ಲಿ
ನಿನ್ನೆಗಳ ತುಳಿವ ಜಾಡು
ಇಂದು ಎಂಬುದು ಉರಿವ ಒಡಲ ಬೆಂಕಿ
ಗುರಿಯೊಂದೆ ಬೆಳಕನಾಡು
ಸುಡುವ ಬದುಕಲ್ಲಿ ನಿತ್ಯಯಜ್ಞ
ಉಸಿರುಗಳ ಸ್ವಾಹ ಮಂತ್ರ
ತನ್ನ ತಾ ಕಳೆದು ಬೆಳಗಿಕೊಳುವ
ವ್ಯಾಪಾರ ಶಿವನ ತಂತ್ರ