ಗುರುವಾರ, ಡಿಸೆಂಬರ್ 26, 2013

ಗುರುವಾರ, ಡಿಸೆಂಬರ್ 12, 2013

ನೊಗದ ನೆಲೆ

ಬೆವರಾಗಿ ರಕ್ತ
ಸಾವಿರದ ಅನ್ನ
ಮುಡಿಪಾದ ತನ್ನತನ
ದಿನವೂ
ಬದುಕುವ ಸಾವೆಂಬ ಆಟ
ಸಾಯುವ ನೋವಿನೋಟ
ಬೆಳೆ ಕಳೆಗಳ
ಮಧ್ಯೆ
ನೊಗದ ಸಾಗಾಟ
ತಪದಿ ಗಳಿಸಿದ
ಅಗುಳು
ಗಂಟಲಿಳಿಯದಷ್ಟು ಋಣ
ಬೆಳಕಾಗದಿದ್ದರೂ ಬೆಳೆಗೆ
ಕೊನೆಗೆ ಕೊಳೆತು
ಗೊಬ್ಬರವಾದರೂ
ಆಗಬೇಕು
ನೊಗದ ನೋವಿಗೆ
ಈಡಾಗಲೇ ಬೇಕು

http://www.youtube.com/watch?v=jj5RGLjF-tM





ಶನಿವಾರ, ನವೆಂಬರ್ 16, 2013

ಬೆಳ್ಕೊಂದೈತೆ

ಏನಾಗೋದ್ರೂ ಬದ್ಕ್ಲೇಬೇಕು ಹುಟ್ಟಿದ್ದಕ್ಕೆ
ಕೈಯಲ್ಕಾಸು ಆಡ್ತಿರ್ಬೇಕು ಉಸ್ರಾಡೋಕೆ
ಭೂಮಿಲ್ಜನಾ ದಿನಾ ಸಾಯೋದ್ಕಾಸ್ಕಾಣೋಕೆ
ಬದ್ಕನ್ನೋದೇ ದಿನಾ ಚೂರ್ಚೂರ್ ಸಾಯೋದಕ್ಕೆ

ರಕ್ತಕರ್ಗಿ ಬೆವ್ರಾಗ್ ಹರ್ದ್ರೆ ರೋಗಾ ಇಲ್ಲ
ಹಂಚಿತಿನ್ನೋ ಮನ್ಸೂ ಇದ್ರೆ ಜೀವ್ನಾ ಬೆಲ್ಲ 
ದಿನಾ ಸಿಹೀ ತಿಂದ್ರೆ ಏನೂ ತಿಳಿಯೋದಿಲ್ಲ
ಬೇವಲ್ ಹೂವಾದ್ಕಾಲಕ್ಕೆಸ್ರೆ ವಸಂತ್ಕಾಲ

ಸುತ್ತಲ್ಜನ್ರ ಕಣ್ಣಲ್ ನಮ್ನಮ್ ಮುಖದ್ಬೆಳ್ಕು
ಕಾಣೋದಕ್ಕೆ ಎದ್ಯೊಳ್ಗೆ ಬೆಳ್ಕಿರ್ಬೇಕು
ಕಾರಿರ್ಳೂಲೂ ಕಂಗಾಲಾಗ್ದಂಗ್ನಮ್ಮೊಳ್ಗೈತೆ
ಒಳ್ಗೆ ಇಳ್ದು ನೋಡ್ತಾ ಇದ್ರೆ ಮಾತಾಡ್ತೈತೆ.

ಬುಧವಾರ, ಸೆಪ್ಟೆಂಬರ್ 25, 2013

ಅದೇನಾಯಿತೆಂದರೆ,

http://mangalore.olx.in/the-bliss-iid-550481241




ಬೆಳಕು ಕತ್ತಲುಗಳ ನಡುವಿನ
ನೀರವ ಮೌನ
ಸಾಕಾಗಿ ನೀರು ಮಣ್ಣಿನ ಪಾನ

ಹೂವಾಗಿ ಅರಳಿತು
ಬಣ್ಣದ ಚಿಟ್ಟೆಯೊಂದು ಕೆರಳಿತು
ಹೂವಿನೊಳಗಿಳಿಯಿತು
ಇಳಿದ ಚಿಟ್ಟೆ ಸವಿಯಿತು
ಮೆಲ್ಲ ಮಾತನಾಡಿತು

ಹೂವಿನದೋ ದಿವ್ಯ ಮೌನ
ಬೆಳಕಿನದೇ ಧ್ಯಾನ

ಚಿಟ್ಟೆಯದೂ ಕಣ್ಣು ಹೊರಳಿತು
ಬೆಳಕು ಹೂವ ಕಂಡಿತು
ರೆಕ್ಕೆ ಹರಡಿತು
ಅತ್ತ ಹೊರಟಿತು

ಬಣ್ಣದ ರೆಕ್ಕೆ ಬೆಳಕಿನಲಿ
ಕರಗಿ ಬೆಳಗಿತು ಗಾಳಿಯಲಿ
ಮತ್ತೆ ನೀರಿನಲಿ

ಇತ್ತ ಹೂವಿನ ಧ್ಯಾನ ಬೀಜದಲಿ
ತಾನು ರೆಕ್ಕೆ ಬಿಚ್ಚುತ್ತಾ
ಚಿಟ್ಟೆ ಮೊಗ್ಗಾಗಿ
ಅರಳಿತು...




ಶನಿವಾರ, ಸೆಪ್ಟೆಂಬರ್ 14, 2013

ನಾನೂತನಾನೂ

ಇಲ್ಲದಿದ್ದರಿರಲಾರದ
ಗುಣ
ಅಗಣಿತ
ಇದ್ದರೂ
ಇಲ್ಲದೇ
ಇರುವ
ನಿರ್ಗುಣ

ಕಾಣಲಾರದೇ
ಕತ್ತಲಾದ
ಬೆಳಕು

ಕಾಣಲೆಂದೇ
ಬೆಳಕಾದ
ಕತ್ತಲು

ನನ್ನ ನಾ
ನೋಡಲಾರದೆ
ನಿನ್ನ
ನೋಡುವೆ

ನಿನ್ನಲೇ
ಬೆರೆತು
ನನ್ನ
ಹುಡುಕುವೆ

ಹೂವೆ

ಬರಿದೆ ಅರಳುವೆ

ನಾನು
ನೀನು
ಆಗದೆ

ತಾನಾಗುವೆ

ಶನಿವಾರ, ಜುಲೈ 6, 2013

ಶ್ರೇಷ್ಟ ಜೀವಿ!

ಹಸಿದಾಗ ಮಾತ್ರ ಬೇಟೆಗೆ ಹೊರಡುವ
ಕಾಡು ಪ್ರಾಣಿಗಳು ಕಡುಕ್ರೂರಿಗಳು

ತುತ್ತು ರೊಟ್ಟಿಗಾಗಿ ಮತ್ತು ಅಲ್ಪ ಮಿಥುನಕ್ಕಾಗಿ
ಕಚ್ಚಾಡುವ ನಾಯಿಗಳದೆಂಥಾ ನಾಯಿಬುದ್ಧಿ?

ಬೀಡಾಡಿ ಗೂಳಿಗಳಿಗೋ
ಕುಟುಂಬ ಯೋಜನೆಯ ಗಂಧಗಾಳಿಯೂ ಇದ್ದಂತಿಲ್ಲ

ಹುಟ್ಟಾ ಗಲೀಜಿನ ಹಂದಿಗಳನ್ನು
ರುಚಿಯಿಂದ ಮಾತ್ರ ಮೆಚ್ಚಬಹುದು

ಅಷ್ಟೊಂದು ಅಕ್ಕರೆಯಿಂದ ಸಾಕಿದ ಕೋಳಿಗಳನ್ನು
ಮೋಸದಿಂದ ಕದ್ದೊಯ್ದು ಬಿರಿಯಾನಿ ಮಾಡದೇ ತಿನ್ನುವ
ನರಿಗಳದು ಠಕ್ಕು ಜೀವನ

ಚುನಾವಣೆಯೇ ಬೇಕಿಲ್ಲದೆ ಪ್ರಚಾರಕ್ಕೆ ಹೊರಡುವ ಕಾಗೆಗಳು
ಬಲು ಕರ್ಕಶ

ಕೈಕಾಲಿದ್ದು ಕಾಡನ್ನು ಕಡಿದು ವನಮಹೋತ್ಸವ
ಮಾಡದ ನಿಷ್ಪ್ರಯೋಜಕ ಜೀವಿಗಳಿಗೆ ಮಂಗಗಳೆಂದು ಕರೆಯಬಹುದು
ಗಂಗೆಯಂತಾ ನದಿಗಳ ನೀರಲ್ಲಿದ್ದೂ ಬದುಕಿ ಉಳಿದ ಮೀನುಗಳಿದ್ದರೆ
ನಮ್ಮ ಹೊಟ್ಟೆಯಲ್ಲಾದರೂ ಸಾಯಲಿ!

ಪ್ರಪಂಚವನ್ನು ಇದ್ದಂತೆ ಇರಬಿಟ್ಟು ತಾನು
ಬಣ್ಣ ಬದಲಿಸುವ ಜೀವೆಯೆ ಗೋಸುಂಬೆ!

ಮನುಷ್ಯನೋ ಇವುಗಳನ್ನೆಲ್ಲ ಮೀರಿದ ಶ್ರೇಷ್ಟ ಜೀವಿ!

ಗುರುವಾರ, ಜೂನ್ 13, 2013

ಇರುವೆ -ಇರವು- ಅರಿವೆ- ಅರಿವು

ನನ್ನ ಇರವಿಗೂ
ಈ ಇರುವೆಯ ಇರವಿಗೂ
ಇರುವ ವ್ಯತ್ಯಾಸವೆಂದರೆ,
 ನನಗೆ ನನ್ನ ಅರಿವಿಲ್ಲ,
ಇರುವೆಗೆ ಅದರ ಪರಿವಿಲ್ಲ

ನನ್ನ ಪ್ರಪಂಚ
ನನ್ನ ಪರಿಧಿಯದ್ದೆ
ಪರಿಧಿ ಅರಿವಿನದ್ದೆ
ಆದರೆ ನನ್ನರಿವಿಗೇ ಪರಿಯಿಲ್ಲ
ಅರಿಯದಿದ್ದುದಕ್ಕೆ ಪಾರವಿಲ್ಲ

ಬರಿದೆ ಇರುವಿನ ಕುರಿತು
ಇರುಳಿಡೀ ಕೊರೆದುಕೊಂಡು
ಮಲಗಿ ಏಳುವ ಮೊದಲೇ
ಇರುವೆಯ ಹುತ್ತ ನನ್ನನ್ನೂ ಮೀರಿ
ಮೇಲೆದ್ದಿದೆ!

ನಾನೂ ಇರುವೆ!
ಇಲ್ಲಿಯೆ!
ನನ್ನ ಪರಿಧಿಯಲ್ಲಿಯೆ!