ಶುಕ್ರವಾರ, ಸೆಪ್ಟೆಂಬರ್ 11, 2009

ಆತ್ಮರತಿ-ಆಯ್ದ ಕವನಗಳು

1.ಅಮ್ಮನ ಬುತ್ತಿ ಬೇರಿನಲ್ಲಿ...

ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ
ಮರಕೆಲ್ಲಿ ಗೊತ್ತು?
ಎಲ್ಲಿಂದಲೋ ಬಂದ ರಿವಿಕಿರಣಕ್ಕೆ
ಮುಖ ಮಾಡಿತ್ತು!

ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತು
ಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!
ಬಳುಕುವ ಬಳ್ಳಿಗೆ ಸೋತು ಅಪ್ಪಿ ಬೆಳೆದಿತ್ತು!
ಬಣ್ನ ಬಣ್ನಗಳ ಹಕ್ಕಿಗಳ ಸಂಸಾರ ಮೈ ಎಲ್ಲ ಹೊತ್ತು
ತಾನೋಬ್ಬನೆ ಆಕಾಶಕ್ಕೇಣಿಯಾಗುವನೆಂದು
ಉಬ್ಬಿ ನಿಂತಿತ್ತು!

ಆಗಸವೂ ಸಿಗದೆ ಅಳುಕಿ ತಡಕಾಡಿ
ಬೇರೂ ಸಿಗದೇ ಬುತ್ತಿಯೂ ಸಿಗದೆ ಕಂಗಾಲಾಗಿತ್ತು!
ಮತ್ತೆ ಬೇರನ್ನರಸಿ ಕೆಳಗಿಳಿದಿತ್ತು!
ತಾನು ತಂದಿದ್ದ ಬುತ್ತಿ ಗೆದ್ದಲ ಗೂಡಿನಲ್ಲಿ
ಜೀರ್ಣವಾಗಿತ್ತು

ಬೇರುಗಳ ಸಂಧಿಯಲ್ಲಿ ಎಲ್ಲೋ ಹಣ್ಣಾಗಿದ್ದ ಈಗ
ಮಣ್ಣಾಗಿದ್ದ ಅದರಮ್ಮ ಹೇಳಿದ್ದು
ಆತ್ಮರತಿಗೆ ಮಾತ್ರ ಕೇಳುವಂತಿತ್ತು;
ಮಗುವೇ ನೀನಿನ್ನೂ ಬೆಳೆಯಬೇಕಿತ್ತು..

2.ನೆನಪಲುಳಿ ಕಂಪಾಗಿ

ಅಳುವಿನ ಬಳ್ಳಿಯಲಿ ಅರಳಿದೆ ಮಲ್ಲಿಗೆ
ಹೂ ನಗುತಲಿದೆ ಜುಮ್ಮಗೆ

ಹೂವೊಂದು ಹೊಸತಾರೆ ಕಂಪಿನ ರಸಧಾರೆ
ನಗುತಲಿದೆ ಬಳ್ಳಿ ಮನಸಾರೆ

ಕುಣಿಯಲೇ ಕಂಪು ಬಳುಕಲೇ ಬಳ್ಳಿ
ನಗಲೊಂದು ಹಗಲು ಹೂನಗುವ ದಿನದಲ್ಲಿ

ಗುಡಿಗಲ್ಲ ಮುಡಿಗಲ್ಲ ನಗಲೆಂದೆ ಅರಳಿಹುದು
ನಲಿಸು ಓ ಜೇನೆ ಮೆಲ್ಲಗೆ!
3.ಕತ್ತಲೆಯ ಕತೆ

ಕಣ್ಣು ಕಾಣದವನಿಗೆ ಕತ್ತಲೆ ಕಾಣುತ್ತದೆ
ಕಾರಣ ಕಣ್ಣು ಬೆಳಕನ್ನರಸುತ್ತದೆ

ಬೆಳಕಲ್ಲ ಸೂರ್ಯನೊಬ್ಬನ ಆಸ್ತಿ
ಆದರೂ ಅವರವರ ನೆರಳುಗಳಿಗೆ
ಹೆದರುವವರೇ ಜಾಸ್ತಿ

ಮತ್ತವ ಕತ್ತಲ ಕಂಡಿಲ್ಲ
ಕಾರಣ ಅವನಿಗೆ ನೆರಳೆಂಬುದಿಲ್ಲ

ಕತ್ತಲಿಲ್ಲದಿದ್ದರೆ ಅವನವನೇ ಅಲ್ಲ
ತನ್ನ ಬೆಳಕಲ್ಲಿ ಅವನು ಕಾಣುವುದಿಲ್ಲ

ನಾ ಕಾಣದ ಬೆಳಕು
ನನ್ನದಲ್ಲ
ನಿನ್ನದಲ್ಲ
ಇನ್ಯಾರದೋ ಅಲ್ಲ

ಅದು ಎಲ್ಲಾ ಕತ್ತಲೆಗಳ ಮಗು
ಬಣ್ಣಗಳ ದಾರಿಯಲ್ಲಿ ಬೆಳಕಿನೆಡೆಗೆ
ಸಾಗುವ ಆತ್ಮರತಿಯ ನಗು4.ಅಷ್ಟೆ!

ಕೆಲವೊಂದು ಮಾತುಗಳಿವೆ ಹೇಳಿ ಬಿಡಲಾರದಂತವು
ಕೆಲವೊಂದು ಕವಿತೆಗಳಿವೆ ಅಕ್ಷರವಾಗಲಾರದಂತವು
ಕೆಲವೊಂದು ರಾಗಗಳಿವೆ ಹಾಡಲಾರದಂತವು
ಕೆಲವೊಂದು ಹೆಜ್ಜೆಗಳಿವೆ ಕುಣಿಯಲಾರದಂತವು
ಕೆಲವೊಂದು ನೆನಪುಗಳಿವೆ ಮರೆಯಲಾರದಂತವು

ಅವು ಸಾಗರದಡಿಯ ಮುತ್ತು ರತ್ನಗಳಂತೆ,
ಹೊರಬಂದರೆ ಆಡಂಬರಿಸಿ ಸಾಯುತ್ತವೆ!
ಹಾರಲಾರದೆ ಈಜುವ ಚಿನ್ನದ ಮೀನುಗಳು!5.ನಿರಾಳ ತಾರೆ

ನಾನು ಪ್ರಕೃತಿಯ ವಿಕೃತಿ
ನೀನು ವಿಕೃತಿಯ ಪ್ರಕೃತಿ
ನಾನು ನಿನಗಾಗಿ ಹೆಬ್ಬಂಡೆಯೊಡೆದು
ಹೆಮ್ಮರಗಳ ಬಗೆದು
ಗೋಡೆ ಕಂಬಗಳ ಮನೆ ಮಾಡುತ್ತೇನೆ..
ಕಲ್ಲು ಮರಗಳ ಬೆಂಕಿಗೆ
ನೀನು ಜೀವ ಕೊಡುತ್ತೀಯ!
ಅದರಲ್ಲಿ ಸುಟ್ಟು ನನ್ನನ್ನೂ ಸುಡುತ್ತೀಯ!
ನಿನ್ನನ್ನೊಲಿಸಲು ಮೆಟ್ಟಿಲು ಹತ್ತಿದಷ್ಟೂ
ಚಂದ್ರನ ದೂರ ತಳ್ಳುತ್ತೀಯ!
ವಿಭ್ರಾಂತನಾಗಿ ಕೊನೆಗೊಮ್ಮೆ ಆಗಸ ನೋಡಿದರೆ
ತಾರೆಯಲಿ ನಿರಾಳವಾಗಿ ನಕ್ಕು ಬಿಡುವಿಯಲ್ಲ..
ನಿನ್ನ ರೀತಿಗೆ ಆತ್ಮರತಿಯೆನ್ನದೆ ಏನೆನ್ನಬೇಕು ಮತ್ತೆ!

ಗುರುವಾರ, ಸೆಪ್ಟೆಂಬರ್ 3, 2009

ಸಿರಿಕಮಲ

ಕಂದು ಕೊಳದಲ್ಲೊಂದು
ಸಿರಿಕಮಲ ಅರೆಯರಳಿ
ಕೆಂಪಾಗಲೂ ನಾಚಿ ಕೆಂಪಾಗಿದೆ.
ಕೆಂದಳಿರ ಸಂದಿಯಲಿ
ಕಾಣದೇ ಕುಕಿಲೊಂದು
ಮೌನಕ್ಕೇ ಮುತ್ತಿಟ್ಟು ಇಂಪಾಗಿದೆ.
ರಾತ್ರಿಯಲಿ ಹುಣ್ಣಿಮೆಯ
ಕನಸು ಬಂದಂತಾಗಿ
ನಿಟ್ಟುಸಿರ ಕಾವಿನಲಿ ಒಲವರಳಿದೆ .

ಶುಕ್ರವಾರ, ಜುಲೈ 10, 2009

ನಿರೀಕ್ಷೆ!

ಹನಿಗೆ ಮುಳುಗುತ
ಸುಳಿಸೆಳೆಗೆ ಸೆಣಸುತ
ಮಳೆಗೆ ಹೊರಟಿದೆ ಕಾಗದದ ದೋಣಿ
ಒಳಗೊಳಗೆ ಕನಸುಗಳ ಕವನ ಹೊತ್ತು!

ಭಾನುವಾರ, ಮೇ 17, 2009

ಏಳು

೧.ನಿನ್ನ ಕಣ್ಣ ಏಳು ಬಣ್ಣ
ಕನಸು ಬಲೆಗೆ ಬಿದ್ದೆ 
ಏಳು ತಳದ ಅಳಕೆಲ್ಲೋ
ಕಳೆದು ಹೋಯ್ತು ನಿದ್ದೆ! 

೨. ರೆಪ್ಪೆ ನೀನು ಬದಿದಲೆಲ್ಲಾ
ಏಳು ಅಲೆಯ ಹೊಡೆತ
ಸುಮ್ಮನೊಂದು ಹಾಸ ಹೊನಲು
ಏಳು ಸ್ವರದ ಮಿಳಿತ!
 
೩. ಏಳು ಕೋಟೆ ಮಿರಿ ಬಂತು 
ಎದೆಯ ಇಂಚರ 
ಕಳೆದು ಜೀವ ನಿನ್ನ ಸೆಳೆವ
ಹುಚ್ಚು ಕಾತರ 

೪. ಏಳು ಕದಲಿನಾಚೆಗೆಲ್ಲೋ 
ಸ್ವಪ್ನದ್ವೀಪ ಒಂದಿದೆ 
ಎದೆಯ ಬಡಿತ ಎರವಲಾಗಿ
ಏಳು ಜನುಮ ಕಾದಿದೆ

ಬುಧವಾರ, ಮೇ 13, 2009

ಅಂತರಂಗ


 ಏಕಾಂತ ಹಪಹಪಿಸಿ

ನಿನ್ನ ಸನ್ನಿಧಿಯ ಬಯಸಿ

ಕಡಲಿನಲೆ ಸೆಳೆವಂತೆ ಸುಳಿಯುತಿಹುದು.ಕಾಡುಮೇಡುಗಳಲ್ಲಿ

ಹಕ್ಕಿಗೂಡುಗಳಲ್ಲಿ ಹಸಿರಾಗಿ

ಹಾಡಾಗಿ ಹೊಮ್ಮುತಿಹುದು.ರಮ್ಯದಿಂ ಗಮ್ಯಕ್ಕೆ

ತಂತಿಯಂ ಶೃತಿಗೊಳಿಸಿ

ಶೂನ್ಯ ತಾರಕದೀ ಬೆರಳು ಸವೆಯುತಿಹುದು.ಎದೆಯೊಡಲ ಗರ್ಭದಲಿ

ಭ್ರೂಣದಾಕೃತಿಯಲ್ಲಿ

ನಿನ್ನ ಮುಡಿಗೆಂದೇ ಹೂವೊಂದು ಅರಳುತಿಹುದು.

ಮಂಗಳವಾರ, ಮೇ 12, 2009

೦5


ಆಗಸದಲ್ಲಿ ನಗುವ ತಾರೆಗೇನು ಗೊತ್ತು

ಕತ್ತಲ ಮೌನದಲ್ಲಿ ನುಂಗಿದ ನನ್ನದೇ ಕಣ್ಣೀರ ಮತ್ತು!

ಬುಧವಾರ, ಮೇ 6, 2009

04

ಬತ್ತಿ ಸತ್ತಿದ್ದೆಷ್ಟೊ ಎಣ್ಣೆ ಬತ್ತಿದ್ದೆಷ್ಟೊ ದೀಪ ನಕ್ಕಿದ್ದೆ ಸತ್ಯ!

ಸೋಮವಾರ, ಮೇ 4, 2009