ಗುರುವಾರ, ಸೆಪ್ಟೆಂಬರ್ 2, 2010

ಧೇನು ಪುರಾಣವು


ಋಷಿಯೊಬ್ಬ ಲೋಕಕ್ಕೆ ಕರುಳಿಂದೆ ಒರಲಿದ

ಖುಷಿಯಿಂದ ಕರುಕರೆಗೆ ಮರು ಗೋವು ಗೆಲೆವಂತೆ
ನಶೆಗೊಂಡರಾ ಪಂಡಿತರನೇಕರನೇಕರಲ್ಲಿ ಹಸಿಹುಲ್ಲನಿತ್ತು
ಹುಸಿಪ್ರೀತಿಯಂ ತೋರಿ ಕರೆದರಾ ಸವಿಕ್ಷೀರವನು ಬರಿದೆ ಬಾಯಾರಿ

ಪಾನ ಪಂಡಿತನೊಬ್ಬ ಹಸಿಹಾಲಹೀರಿದನ
ವನ ಮೀರಿಸಲೊಬ್ಬ ಕುದಿಸಿ ಕೆನೆತೆಗೆದ
ವನವಸ್ತು ಸೇರಿಸಿದ ಬಹುರುಚಿಯ ತೋರಿಸಿದ
ಜನಕೆ ಬಡಿಸುತ ಹಿಗ್ಗಿ ಬಾಯಿ ಚಪ್ಪರಿಸಿದ

ಪಾಯಸವ ಮಾಡಿದರಾಯಾಸ ಮೀರಿದರವರು
ಸಾಯದೇ ಸ್ವರ್ಗವನು ಕಂಡೆವೆಂದುಲಿದರು
ಮಾಯಕ್ಕೆ ಮೇಲೊಂದು ಕರಿಕಂಬಳಿಯ ಹೊದ್ದರು
ಕಾಯಕ್ಕೆ ತಕ್ಕಂತೆ ನೆಲಬಳಸಿ ಗೊರೆದರು

ಕಾಲಕಾಯುತಲಿದ್ದ ಜಗದೇಕ ಪಾಮರನು
ಬಾಲಕನ ಮನದವನು ಲೀಲೆಯಲಿ ಹನುಮನು
ಕಾಲಸದ್ದಿಲ್ಲದೆ ಕೊಟ್ಟಿಗೆಗೆ ಬಂದನು
ಖೂಳ ಪಂಡಿತರನೆಲ್ಲ ಮನಸಾರೆ ಬೈದನು

ಕುಣಿಕೆಯಂ ಬಿಡಿಸಿದಂ ಚೆಂಗರುವ ಪುಟಿಸಿದಂ
ಹಣಕಿ ತಾ ನೋಡಿದಂ ಹಸಿದು ಹರಿದಿದ್ದ ಜೊಲ್ಲನುಂ
ಚಣಚಣಕು ಕುಣಿಯುತ್ತ ಕಣಕಣವ ಸವಿಯುತ್ತ
ಮೇಣ್ ಬಾಲವೆತ್ತುತ್ತ ಕುಣಿವ ಕರುವಂ

ಕಣ್ಣಲ್ಲೆ ನಲಿಯುತ್ತ ಮೈಎಲ್ಲ ನೆಕ್ಕುತ್ತ
ಬೆಣ್ಣೆಯಂತಿಹ ಕರುವ ಕಲೆತ ಹಸುವಂ
ಕಣ್ಣ ತುಂಬಿಸಿ ತಾನು ಪಾಮರಂ ಹಿರಿಹಿಗ್ಗಿ
ಚಿಣ್ಣನಂತಲೆ ಸವಿದನಾ ಋಷಿಸಹಜ ಕಾವ್ಯಮಂ

ಮಂಗಳವಾರ, ಜುಲೈ 6, 2010

ನಿರೀಕ್ಷೆ

ತಿಳಿನೀರ ಕೊಳದಲ್ಲಿ
ಚಳಿಯ ಗಾಳಿಗೆ ಸೋಕೆ
ಎದ್ದ ಅಲೆಯಂತಾಗಿ ಅದುರುತಿರುವೆ

ಕಮಲಗಳ ಸೋಕದಲೆ
ನನ್ನ ಚಳಿನನಗಿರಲಿ
ಎಂದು ತಂತಾನೆ ನಾ ಕೊರಗುತಿರುವೆ

ತಾರೆಗಳು ನಗುವಾಗ
ಇಳಿಸಿಕೊಳ್ಳುತ ಒಳಗೆ
ನೀರಲ್ಲೆ ಚಿತ್ತಾರ ಬರೆದು ನಲಿವೆ

ಕಾಯುತಿಹೆನಾ ಬೆಳಕ
ರಂಗುಗಳ ಸರಿ ಎರಕ
ಹೂಗಳರಳುವ ಪುಳಕ
ಬೆಳಕಿನೊಳು ಬೆಳಕನ್ನು ತುಂಬಿಕೊಳುವೆ

ದಾಸವಾಳ

ನಿನ್ನ ಸೆಳೆವ ಗಂಧವಿಲ್ಲ
ನೀನೆ ಎಂಬ ಬಂಧವಿಲ್ಲ
ಇರುವಿನರಿವೆ ಒಲವು ತುಂಬಿ ನಗುವು ಮೊಗದಲಿ

ಬೆಳಕುದೇವ ನಗುವ ಕೊಟ್ಟ
ಹಕ್ಕಿ ಹಾತೆಯೊಲವನಿತ್ತ
ಕಂಡ ಮನುಜ ತಾನೂ ಒಳಗೆ ಬೆಳಗಿಕೊಳ್ಳಲಿ

ಹಾಸ ಹಂಚುವಾಸೆಯಲ್ಲಿ
ದಾಸಿಯಾದೆ ಸೃಷ್ಟಿಗಿಲ್ಲಿ
ದಾಸವಾಳದಾಳದೊಲುಮೆ ಸಿರಿಯ ಹಂಚಲು

ಅರೆನಿದ್ದೆಯ ಪದಗಳು

ನವಿರು ನೂಪುರ ನಾದ
ಕಣ್ದೆರೆಯೆ ಕನಸು
ಮುಸುಕು ಮೋಡದ ನಡುವೆ
ಮುಸಿನಕ್ಕ ಚಂದಿರ

ಹಸೆಯ ಹಾಕಿದ ಹಾಗೆ
ಹುಸಿಯೆ ಬಳೆಗಳ ಸದ್ದು
ಹೊಸಿಲ ಬಾಗಿಲ ತೆರೆದೆ
ಚಳಿಗಾಳಿಗೂ ಮತ್ಸರ

ಅಂಗಳದ ಚಪ್ಪರದಿ
ಬೆಳೆದು ಬಿಳಿದಿದೆ ಕಂಪು
ನಾರು ಹೊಸೆಯುವ ಹಾಡು ಎನಿತು ತಂಪು
ಕಟ್ಟೊಂದು ಕೂಸು ಜೋಗುಳವ ಕೇಳಿರ?

ಕನಸು ಕಟ್ಟಿದೆ ಇರುಳು
ಮೊಲ್ಲೆ ಮುಡಿದಿದೆ ಹೆರಳು
ಎಲ್ಲೋ ಕಾದಿದೆ ನೆರಳು
ಇಲ್ಲಿ ನಿದ್ದೆಗೂ ಬೇಸರ!!

ಭಾನುವಾರ, ಜುಲೈ 4, 2010

ಸಾಕಷ್ಟು ಸತ್ತು

ಮಾವಿನ ನಾರುಗಳೆಡೆಯಲಿ ತುಟಿಯಿಟ್ಟು ರಸಹೀರುತ್ತಾ
ಕಪ್ಪೆಗಳ ಆಲಾಪದ ಅರ್ಥ ಹುಡುಕುತ್ತಿದ್ದೆ
ಇಲ್ಲಿ ಎದೆ ನಿನ್ನ ಕರೆದಾಗ ಕಿವುಡಾಗಿ ಗೊರೆಯುತ್ತಾ
ಮತ್ತೆ ಏನೂ ಕೇಳದಂತೆ ಗೊರೆಯುತ್ತಿದ್ದೇನೆ
ಎಲ್ಲೋ ದಾರಿ ತಪ್ಪಿದ್ದೇನೆ!



ಎಲೆಯಿಂದಲೆಲೆಗೆ ಇಳಿದ ಹನಿಗಳ ಸದ್ದು
ಭುವಿಯೊಡಲಲ್ಲಿ ಪಿಸುಗುಟ್ಟುವಾಗ ನಿದ್ದೆಗೆ ಜಾರುತ್ತಿದ್ದೆ
ಈಗ ನೋಡಿದರೆ ಫ್ಯಾನಿನ ಲವಲವದಲ್ಲಿ ಮಗ್ಗುಲು ಬದಲಿಸಿ
ಕರೆಂಟು ಹೋದಾಗಲೆಲ್ಲಾ ನೂರೆಂದು ಶಪಿಸಿ ಕಾಲ ತಳ್ಳಿದ್ದೇನೆ
ಎಲ್ಲೋ ತುಕ್ಕು ಹಿಡಿಯುತ್ತಿದ್ದೇನೆ!

ಜಗದೇಕವೀರರ ಕತೆಕೇಳಿ ಅದರ ಕನಸಲಿ ಬಿದ್ದು
ಇಲ್ಲದ ಮೀಸೆ ತಿರುವುತ್ತಿದ್ದೆ
ಕ್ರೀಂ ಮರೆತ್ತದ್ದಕ್ಕೆ ಹಲ್ಕಚ್ಚಿ ಹಾಗಾಗೇ ಕೆರೆದು
ಸೂಟಿನಲಿ ಸೇರುತ್ತ ಸಂತೆಗೆ ರೆಡಿಯಾಗಿದ್ದೇನೆ
ಸಕಷ್ಟು ಸತ್ತು ಮರುಸುತ್ತು ನಗುತ್ತಿದ್ದೇನೆ!

ನಾನು



ನಿನ್ನೆಯ ಹೆಣ
ನಾಳೆಯ ಮಗು
ಸಾವಿರಾರು ನಾಳೆಗಳ ಬಸುರಿಯಾಗಿ
ಸತ್ತು ಹುಟ್ಟಿ, ಹುಟ್ಟು ಹಾಕುತ್ತ
ಮರಣ ಜನ್ಮ ಪ್ರಸವವೇದನೆಗಳ ಸಮರಸವ
ಸವಿಯುತ್ತ ಬದುಕುವಾಗ
ಆದಿ ಅಂತ್ಯಗಳ ಗೊಡವೆ ನನಗೇಕೆ?

ನಾ ನಡೆದಷ್ಟೂ ಜಗವು ಅರಳುತ್ತಿರಲು
ಕಣ್ಣು ತೆರೆದಷ್ಟೂ ಬಣ್ಣ ಕೆರಳುತ್ತಿರಲು
ಬೆಳಕು ಕರೆಯುತ್ತಿರಲು
ಮತ್ಯಾಕೆ ಬೇಕೆನಗೆ ಇಲ್ಲದ ಗೋಳು?

ನಿನ್ನೆಗಳ ಹೆಣಹೂತ ಭೂಮಿಯಲಿ
ನಾಳೆಗಳ ಬೀಜನೆಟ್ಟು
ಚಿಗುರುವ ಚೆಂದಕ್ಕೆ ಕಾಯುವ ಮಗು ನಾನು
ನನಗೊಂದು ಬೇಲಿ ಬೇಕೇನು?

ಸೋಮವಾರ, ಮೇ 3, 2010

ಮಂಜಿನ ಮರೆಯಲಿ

ಎಲ್ಲಾ ಇಲ್ಲೆ ಮನೆಯೊಳಗಿದ್ದರೆ
ಮನಸಿಗೇನು ಕೆಲಸ?

ನಿನಗಾಗಿ ನಾನು ಅಲೆಯದಿದ್ದರೆ
ಸವೆದೀತೆಂತು ವರುಷ?

ದನಿಯ ಮೊದಲೆ ಕುಕಿಲನು ಕಂಡರೆ
ಅದು ಇನ್ನೆಲ್ಲಿಯ ಛಂದ?

ಮೋಡವೆ ಇಲ್ಲದೆ ಮಳೆ ಬಂತೆಂದರೆ
ಕಂಡೀತೆ ನವಿಲಂದ?

ಕನಸನು ಕಾಣದೆ ನಿನ್ನನು ಕಂಡರೆ
ಬದುಕಲಿ ಒಲವೆಲ್ಲಿಂದ?

ರಾತ್ರಿಯ ಛಳಿಯನು ಸವಿದರೆ ಮೊಗ್ಗಿಗೆ
ಮಂಜಿನ ಮರೆಯಲಿ ಲಾಂಧ್ರ;

ಕೈಯಲೆ ಬದುಕನು ಮೆಲ್ಲುವ ಬದುಕಿಗೆ
ಕಂಡೀತಲ್ಲೆ ಬ್ರಹ್ಮರಂಧ್ರ.

ಗುರುವಾರ, ಏಪ್ರಿಲ್ 29, 2010

ದಂತಕತೆ

ಮನೆಬಿಟ್ಟು ಹೋದ ಗುಬ್ಬಚ್ಚಿಯ ಚುಂಚಿನಂತಿದ್ದರೂ
ಅರಳಲು ನಾಚುತ್ತಿರುವ ಮಲ್ಲಿಗೆಯಂತಿದ್ದರೂ
ದೇವರ ಅದ್ಭುತ ನವ್ಯಕಲೆಯಂತಿದ್ದರೂ
ಕಡೆದು ಕೊರೆದು ಗೋಡೆಕಟ್ಟುವರಲ್ಲ;
ವಕ್ರತೆಯೇ ಸೌಂದರ್ಯವೆಂದು ಈ
ದಂತವೈದ್ಯರಿಗೆ ತಿಳಿಯುವುದಾದರೂ ಎಂದು?

ಶುಕ್ರವಾರ, ಏಪ್ರಿಲ್ 16, 2010

ನಾವೆ!

ಹೆಸರಿಗೆ ಪ್ರೇಕ್ಷಕರು
ನಾಟಕದುಸಿರಿಗೆ ಅವರೂ ಪಾತ್ರಗಳೆ!
ಬದುಕಿನ ನಾವಿಕರು
ತೇಲುವ ನಾವೆಗೆ ನಾವೇ ಜೀವಕಳೆ!

ಬಹು ಬಹು ವೇಷಗಳು
ಥರ ತರ ಪರಧೆಗಳು
ವಿಧ ವಿಧ ಲೆಕ್ಕಾಚಾರದ ನಡೆಗಳು
ಸುಳಿ ಸೆರೆ ಮೀರುತ ಹೊಸ ಹುಟ್ಟಿಗೆ ಸಾಗಿದೆ ನಾವೆ!

ನಾಟಕ ಮುಗಿಸಿದರೂ
ಕತೆ ಮುಗಿವಂತಿಲ್ಲ
ದಡವನು ಸೇರಿದರೂ
ಪಯಣವು ನಿಂತಿಲ್ಲ

ತೆಂಕಣಗಾಳಿಗೆ ಬಡಗಣ ಬಯಕೆ
ಮೂಡಣ ದೀಪಕೆ ಪಡುವಣದರಿಕೆ
ತಾರೆಗಳಲ್ಲಿವೆ ಆಗಸವೆಲ್ಲ
ಲೆಕ್ಕವೆ ಸಿಕ್ಕಿಲ್ಲ!

ಬುಧವಾರ, ಮಾರ್ಚ್ 17, 2010

ಹೂ ಬಳ್ಳಿ ಮಾಲೆ



















ಎಂತು ನಗುವುದೇ ಹೂವು
ಸವಿನಗೆಯ ಕಲಿಸಿತೇ ಮಾವು

ಕಾಡು ಕಂಡ ಕನಸು ಕುಸುಮ
ಬೀಡು ಬಿಟ್ಟಲೆಲ್ಲಾ ಪ್ರೇಮ

ದಿನದ ಸಾವಿಗೊಂದು ಜೀವ
ಬೆಸೆವ ಬದುಕು ಎಂಥಾ ಭಾವ

ಎಲ್ಲೂ ಕಾಣದಂತೆ ಥಳಕು
ಲತೆಯ ಮಡಿಲಲೆಂಥಾ ಬೆಳಕು

ಹರಸುವವನ ಹರಕೆ ಹೂವು
ಒಂದು ಸಣ್ಣ ನಗೆಯ ಚೆಲುವು

ಎಂತು ನಗುವುದೇ ಹೂವು
ಕಲೆತು ಕಲಿಯುವ ನಾವೂ

ಭಾನುವಾರ, ಫೆಬ್ರವರಿ 28, 2010

ಸಂಜೆಯಾಗುವುದೆಂದಿಗೆ?

ಭುವಿಯ ನಾಚಿದ ಮೊಗದಿ ರವಿತಿಲಕ ಹೊಳೆವಂತೆ
ಸಂಜೆಮಲ್ಲಿಗೆ ಮುತ್ತು ಮಣಿ ನಕ್ಷತ್ರವರಳುವಂತೆ
ಚಿನ್ನ ಕರಗಿದಂತೆ ಕವಿವ ಕತ್ತಲೆಯ ಕವಿಯಾಗೆ ಬೆಳ್ಳಿಚಂದಿರ ಇಣುಕುವಂತೆ
ಹಕ್ಕಿಯಂದದಿ ಬದುಕು ಚಿಲಿಪಿಲಿಸಿ ಎದೆಗೂಡ ಸೇರುವಂತೆ
ಸಂಜೆಯಾಗುವುದೆಂದಿಗೆ?

ಇಂದು ಕಾಡಿದ ಕನಸು, ಇಂದು ನೋಡಿದ ನವಿಲು
ಇಂದು ಗೀರಿದ ಗಾಯ- ಇಂದೇರಿ ಮೆಟ್ಟಿದ ಮೆಟ್ಟಿಲು
ತಮ್ಮದೇ ನೋವಿನಲಿ ತಮ್ಮದೇ ತಾಳದಲಿ
ತಮ್ಮದೇ ನಲಿವುಗಳ ಸ್ವಪ್ನಮೇಳದಲಿ
ಗುಂಪು ಗುಂಪಾಗಿ ಗುನುಗುತ್ತ ಒಡಲ ಸೇರುತಲಿ
ನಾಳಿನರುಣೋದಯಕ್ಕೆ ಹೋಚೆಲ್ಲಿ ಮಲಗುವ
ಸಂಜೆಯಾಗುವುದೆಂದಿಗೆ?

ಅದೇ ಭೂಮಿ ಅದೇ ಭಾನು
ಅದೇ ಮನಸು ಅದೇ ಕಣ್ಣು
ಕ್ಷಣಕ್ಷಣವೂ ನವಚಿತ್ರ ವರ್ಣಶೃಂಗಾರ
ಸಾಕ್ಷಿಗೊಬ್ಬನೆ ಸುಪುತ್ರ ಆತ್ಮನೆನ್ನುವ ಮಿತ್ರ
ಅವನವ್ಯಕ್ತದುದ್ಗಾರವೀ ವರ್ಣಚಿತ್ರ
ಆಕಾಶಗಂಗೆಯಲವ ಧೃವನಾಗಿ ಮಿಂಚುವ
ಮಂಜುಮುಸುಕಿದ ಬಣ್ಣ ಕಣ್ಣಾಗಿ ಕಾಣುವ
ರಸ ಸಂಜೆಯಾಗುವುದೆಂದಿಗೆ?

ಶನಿವಾರ, ಜನವರಿ 30, 2010

ಹೊಟ್ಟೆಹಾಡು

ಹೊಟ್ಟೆಯಿಂ ಗಣಪನೂ
ಹೊಟ್ಟೆಯಿಂ ಠೊಣಪನೂ
ಹೊಟ್ಟೆ ತಾ ಹಿರಿದು ಸಕಲ ಜೀವರಾಶಿಗಳಲೆಲ್ಲ!

ಹೊಟ್ಟೆಯಲೆ ಹರಿದಿಹುದು
ಜಗವ ಹೊತ್ತಿಹ ಹಾವು
ಬಿರಿವ ಜೀವನಕೆಲ್ಲ ಹೊಟ್ಟೆಯದೆ ಕಾವು!

ಹೊಟ್ಟೆಗಾಗಿಯೆ ಜನರು ಉತ್ತಿ ಬಿತ್ತುವರಣ್ಣ
ಹೊಟ್ಟೆ ಮೀರಲು ಬರಿದೆ ಬಿದ್ದು ಸಾಯುವರಣ್ಣ
ಹೊಟ್ಟೆಪಾಡಿಗೆ ಗಟ್ಟಿ ನಿಂತು ಬದುಕುವ ಜಾಣ!

ರಟ್ಟೆಯಿಂದಲೆ ಹೊಟ್ಟೆ ತುಂಬುತಿರಲಿ
ಎದೆಯಮೀರುತ ಕೆಟ್ಟು ಬೆಳೆಯದಿರಲಿ
ಹೊಟ್ಟೆ ಹಾಡಿಗೆ ದಿನವೂ ರವಿ ಅರಳಲಿ!

ಬುಧವಾರ, ಜನವರಿ 20, 2010

ಬಾಲಿಶ

ಕಾಣದ ಜತೆಗಾರ
ಕಾಡುವ ಜಲಗಾರ
ಕಡಲ ತಳಮಳವಾವುದೋ



ಕಂಗಳ ಕಲೆಗಾರ
ನದಿಗಳ ನೇಕಾರ
ಹರಿವ ಹಂಬಲವೇನದೋ

ನೇಸರನ ನಗಿಸುವನೆ
ಕೂಸುಗಳ ಅಳಿಸುವನೆ
ಸೂಸಿದ ಸೊಬಗೆಂಥದೋ

ಒಳಗೆಲ್ಲ ಆಡುತ್ತ
ಹೊರಗೆಲ್ಲ ಕಾಡುತ್ತ
ಜರಗುವ ಪರಿ ಎಂಥದೋ

ಶನಿವಾರ, ಜನವರಿ 9, 2010

ಸೀಳು!


ಹುಣ್ಣಿಮೆಯ ಮೌನಕ್ಕೆ
ಶ್ವಾನದ ಸೀಳು
ತನ್ನ ನೆರಳಿಗೆ ಹಲುಬಿ
ಗೋಳಿಡುವ ಬಾಳು

ಚಂದ್ರ ಧರ್ಮದ ದೀಪ
ನೆರಳು ಭೂತದ ಪಾಪ
ಹಿರಿದು ಇರಿದೀತೇನೋ
ಎಂಬೊಡಲ ಪರಿತಾಪ

ಇಂತು ನಾಯಿಯ ಮಾಯೆ
ಕಾಡುತ್ತಲಿಹುದು
ನಾಡುನಾಡನೆ ನಾಯಿ
ಕಾಯುತ್ತಲಿಹುದು
ಬಡಜನರ ಒಡಲಿನುರಿ ನಭವ ತಟ್ಟಿಹುದು


ಶನಿವಾರ, ಜನವರಿ 2, 2010

ಸಹಜ



ಮಾತನಾಡದೆ
ಮೌನವಾಗದೆ
ಕವನಗಳು ಹಾಡಿದವು

ಚಿಮ್ಮಲಾರದೆ
ಚೆಲ್ಲಲಾರದೆ
ಚಿತ್ತಾರ ಮೂಡಿದವು

ಸುಮ್ಮನಾಗದೆ
ಘಮ್ಮೆನ್ನಲಾಗದೆ
ಕುಸುಮಗಳು ಅರಳಿದವು

ತಣಿಸಲಾರದೆ
ಮನ ಮಣಿಸಲಾರದೆ
ಮಳೆಬಿಂದುಗಳು ಉದುರಿದವು

ಸದ್ದು ಇಲ್ಲದೆ
ಸನ್ನೆ ಇಲ್ಲದೆ
ಭಾವಗಳು ಹರಿದಾಡಿದವು

ಅವನೂ ಸುಮ್ಮನೆ
ಅವಳೂ ಸುಮ್ಮನೆ
ಹೆಜ್ಜೆಗಳು ಸಾಗಿದವು