ಹೆಬ್ಬಾವಿನ ಹಾಗೆ ಊರುದ್ದ ಮಲಗಿರುವ ಸೋಮಾರಿ ರಸ್ತೆಯ ನಿರ್ಭಾವುಕ ಮೌನವೇ ಒಂದು ಸೋಜಿಗ...
ತುಳಿದವರೆಷ್ಟು ಬಾಯಿಗೆ ಕವಳ ಹಾಕಿ ಉಗಿದವರೆಷ್ಟು
ಮೂರೂ ಬಿಟ್ಟು ಚಡ್ಡಿ ಬಿಚ್ಚಿ ಉಚ್ಚೆ ಮಾಡಿದವರೆಷ್ಟು...
ಪುರಸಭೆಯ ಆದಾಯದ ಮೂಲ..
ಅಗೆದರೂ ಬಗೆದರೂ ಗುಂಡಿ ಮುಚ್ಚಿದರೂ...
ಕೊನೆಗೆ ಹಾಳು ಬಿಟ್ಟರೂ ..
ಬಿದ್ದು ಹೊರಳಾಡುವ ಕುಡುಕರಿಗೆ ಹಂಸತೂಲಿಕೆಯೂ
ಸತ್ತು ಹೆಣವಾಗುವ ನತದೃಷ್ಟನಿಗೆ ಶರಶಯ್ಯೆಯೂ
ದಾರಿ ತಪ್ಪಿದ ಸಂಶಯಾತ್ಮನ ಹೊಸ ಸಾಧ್ಯತೆಯೂ
ಹೆಣ ಹೊತ್ತವರಿಗೂ ಕನಸು ಹೊತ್ತವರಿಗೂ ತಾನೆ ದಾರಿಯಾಗಿ
ಮಂದಿ ಮಾಗಧರ ಹೆಸರು ಮೆರೆಸುವ ಮಾಧ್ಯಮವೂ ಆಗಿಯೂ
ಏನೊ ಅಲ್ಲದ ತಪಸ್ವಿಯ ಹಾಗೆ ಸುಮ್ಮನೆ ಉದ್ದುದ್ದ
ಬಿದ್ದುಕೊಂಡ ರಸ್ತೆಯ ಅವಧೂತಚರ್ಯೆಗೆ ಶರಣು ಹೋಗಿರುವೆ..
1 ಕಾಮೆಂಟ್:
ರಸ್ತಾವಧೂತ!
ಕಾಮೆಂಟ್ ಪೋಸ್ಟ್ ಮಾಡಿ