ಭಾನುವಾರ, ಮಾರ್ಚ್ 6, 2011

ಲೆಕ್ಕದ ಪಾಠ ಮತ್ತು ಪ್ರಶ್ನೆ

ಪಾಠ ೧.
ಕಂಸಗಳು: ಆದಿ ಅಂತ್ಯವಿರುವ
ಒಡೆದ ಬಳೆಚೂರುಗಳ ಕಿಡಿಗೇಡಿತನ
ನೆನಪಿಸುವ
ಅಲ್ಲಲ್ಲೇ ಎರಡೆರಡು ಜೊತೆಗೂಡಿ
ಬಿಂದುವೊಂದನ್ನು ಬಂಧಿಯಾಗಿಸುವ
ಗಹಗಹಿಸುವ ಸ್ವಲ್ಪ ಕಿಡಿಗೇಡಿ ಮತ್ತು
ಅಷ್ಟೇ ವಕ್ರ ಬಾಹುಗಳ ಆಕೃತಿಗಳು.

ಇಂತಹ ಕಂಸನೊಬ್ಬನ ಸೆರೆಯಲ್ಲಿ
ಎಲ್ಲ ನೋವುಗಳನ್ನು ಅತ್ತು ಜಯಿಸಿ
ಎಂಟೊಂಬತ್ತು ಮಕ್ಕಳು ಮಾಡುವಷ್ಟು
ಏಕಾಂತವನ್ನು ವಸುದೇವ ದೇವಕಿಯರು
ಹೊಂದಿದ್ದರು ಎಂಬುದು ಪುರಾಣ

ಪಾಠ ೨.
ವೃತ್ತಗಳು:ಉರುಟುರುಟಾಗಿ ಸುಂದರವಾಗಿ
ಸೆಳೆಯುವ ಹಾಗೆ ಒಳಗೆ
ತುಂಬಿಕೊಳ್ಳುವ ತನ್ನ ಫರಿಯಿಂದ
ಎಲ್ಲರನ್ನೂ ದಿನೇ ದಿನೇ ಆಕ್ರಮಿಸಿಕೊಳ್ಳುತ್ತಿರುವ
ಮೌನ ಕುಣಿಕೆ.

ನಮ್ಮ ನಮ್ಮವೃತ್ತಗಳಲ್ಲಿ
ನಮ್ಮ ನಮ್ಮ ’ವ್ಯಾಸ’ರಿಗೆ
ಜೋತುಬೀಳುತ್ತಾ
ನಮ್ಮ ನಮ್ಮ ಫರಿಧಿಯೊಳಗೆ
ಉಸಿರುಗಟ್ಟಿಸಿಕೊಳ್ಳುತ್ತಾ
ಸತ್ತಂತೆ ಬದುಕುತ್ತಿರುವ  ನಮ್ಮದು
ತೆರೆದ ವರ್ತಮಾನ

ಅಭ್ಯಾಸದ ಪ್ರಶ್ನೆ:
ಹಾಗಾದರೆ ಸೆರೆ ಎಂದರೇನು?

ಕಾಮೆಂಟ್‌ಗಳಿಲ್ಲ: