ಮಂಗಳವಾರ, ಸೆಪ್ಟೆಂಬರ್ 8, 2015

ರಾಸ ಪ್ರಾಸ

ಸಣ್ಣ ಆಸೆ
ಕೇಳು ಕೂಸೆ
ನಿನ್ನ ಹಾಡು ಕೇಳಲು

ಕಳ್ಳ ಶಾಮ
ಸುಳ್ಳರಾಮ
ನನ್ನ ಗಡಿಗೆಯ ನೀಡೆನು

ನಿನ್ನ ನಗುವು
ಬೆಣ್ಣೆಯಂತೆ
ನನ್ನ ಪಾಲು ನೀಡೆಯ

ಮೊಸರು ತಂಡುಲ
ನಿನ್ನ ಹಂಬಲ
ಗಡಿಗೆಯಲ್ಲಿ ಕಾಣೆಯ

ಗಡಿಗೆ ಬಿಟ್ಟು
ಉಡುಗೆ ತೋರೆ
ಎಷ್ಟು ಸುಂದರ ನವಿಲಿದೆ

ಬಿಟ್ಟರೊಡೆವುದು
ಚೆಲ್ಲಿ ಮಿಗುವುದು
ನಿನ್ನ ತಲೆಯ ಮೇಲೆ ಗರಿಯಿದೆ

ಕಾಡುಮೇಡನು
ಅಲೆದು ತಂದ
ಸಿಹಿಯ ಹಣ್ಣಿದೆ ನನ್ನಲಿ

ಹಣ್ಣಿಗಿಂತ
ಬಣ್ಣ ತುಂಬಿದ
ಮಾತು ಸಿಹಿಯಿದೆ ನಿನ್ನಲಿ

ನಾಚುವಂತೆ
ಮಾಡಬೇಡ
ಹೊಟ್ಟೆ ಹಸಿದ ಸಮಯದಿ

ದೋಚಿತಿನ್ನುವ
ಆಸೆ ಬಿಟ್ಟು
ಹಂಚಿ ತಿನ್ನುವ ಚಂದದಿ

ಕೊಳಲನೂದಲೆ
ನಿನ್ನ ಹಾಡಿಗೆ
ಜೇನು ಪಾಯಸ ಸವಿಯುತ

ನನ್ನದೇನಿದೆ
ನಿನ್ನ ಪಾಲಿದು
ಮುರಳಿ ನಾದವೇ ಜೀವಿತ

1 ಕಾಮೆಂಟ್‌:

sunaath ಹೇಳಿದರು...

ಶಿಶುಗೀತೆ ಎನ್ನಲೆ ಈ ದೇವಗೀತೆಗೆ?